ಮೂಡುಬಿದಿರೆ : ಸಮಯಪ್ರಜ್ಞೆ, ನಿಸ್ವಾರ್ಥ ಸೇವೆ ಹಾಗೂ ಪರೋಪಕಾರದಂತಹ ಮೌಲ್ಯಗಳನ್ನು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಸ್ವಯಂಸೇವಕರು ತಮ್ಮ ಜೀವನದ ಆದರ್ಶಗಳನ್ನಾಗಿ ರೂಪಿಸಿಕೊಳ್ಳಬೇಕು ಎಂದು ಪಾರಾದೀಪ್ ಫಾಸ್ಫೇಟ್ಸ್ ಲಿಮಿಟೆಡ್‌ನ ಜಂಟಿ ಪ್ರಧಾನ ವ್ಯವಸ್ಥಾಪಕ ಕೆ. ಬಿ. ಕೀರ್ತನ್ ಕುಮಾರ್ ಕರೆ ನೀಡಿದ್ದಾರೆ. ಇಲ್ಲಿನ ಆಳ್ವಾಸ್ ಪದವಿಪೂರ್ವ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2026–27ನೇ ಸಾಲಿನ ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ರಾಷ್ಟ್ರೀಯ ಸೇವಾ ಯೋಜನೆಯು ಕೇವಲ ಸೇವಾ ಸಂಘಟನೆಯಲ್ಲ, ಅದು ಉತ್ತಮ ವ್ಯಕ್ತಿತ್ವ, ನಾಯಕತ್ವ ಹಾಗೂ ರಾಷ್ಟ್ರಪ್ರೇಮವನ್ನು ಬೆಳೆಸುವ ಜೀವನ ಶಾಲೆಯಾಗಿದೆ ಎಂದ ಅವರು, ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ಇಂತಹ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಎನ್‌ಎಸ್‌ಎಸ್‌ನ ಧ್ಯೇಯವಾಕ್ಯವಾದ "ನನಗಲ್ಲ, ನಿನಗೆ" ಎಂಬ ಸಂದೇಶವೇ ಸೇವಾ ಜೀವನದ ಶ್ರೇಷ್ಠ ತತ್ವವಾಗಿದೆ. "ಶ್ರಮ ಮೇವ ಜಯತೇ" ಎಂಬುದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ವಿಶ್ವದಲ್ಲೇ ಅತಿ ದೊಡ್ಡ ಯುವಶಕ್ತಿಯನ್ನು ಹೊಂದಿರುವ ಭಾರತ, ಆ ಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕೆ ಸದುಪಯೋಗಪಡಿಸಿಕೊಳ್ಳಬೇಕಾದ ಮಹತ್ತರ ಜವಾಬ್ದಾರಿಯನ್ನು ಹೊಂದಿದೆ ಎಂದ ಅವರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರ ಶಿಸ್ತು ಮತ್ತು ಸಮಾಜಮುಖಿ ನಾಯಕತ್ವ ವಿದ್ಯಾರ್ಥಿಗಳಿಗೆ ಜೀವಂತ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್ ಮಾತನಾಡಿ, ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕದ ಜ್ಞಾನವಲ್ಲ; ಅದು ಮಾನವೀಯತೆ, ಸೇವಾ ಮನೋಭಾವ ಹಾಗೂ ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಪ್ರಕ್ರಿಯೆಯಾಗಿದೆ. ಇಂದಿನ ಯುವಜನಾಂಗಕ್ಕೆ ಮಾದಕ ವ್ಯಸನವು ದೊಡ್ಡ ಅಪಾಯವಾಗಿ ಪರಿಣಮಿಸಿದ್ದು, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ತಮ್ಮ ಅಮೂಲ್ಯ ಸಮಯವನ್ನು ವಿದ್ಯಾಭ್ಯಾಸ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಮೀಸಲಿಡಬೇಕು ಎಂದು ಕಿವಿಮಾತು ಹೇಳಿದರು. ವೇದಿಕೆಯಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಶ್ ಚಿಪ್ಳೂಣಕರ್ ಹಾಗೂ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಮೇಘನಾ ಉಪಸ್ಥಿತರಿದ್ದರು. ಸಂಖ್ಯಾಶಾಸ್ತ್ರ ವಿಭಾಗದ ಉಪನ್ಯಾಸಕಿ ಶಾಲೆಟ್ ಕಾರ್ಯಕ್ರಮ ನಿರೂಪಿಸಿದರು, ಮೇಘನಾ ಸ್ವಾಗತಿಸಿದರು ಮತ್ತು ಹಿಂದಿ ವಿಭಾಗದ ಉಪನ್ಯಾಸಕಿ ಡಾ. ರೂಪ ಭಟ್ ವಂದಿಸಿದರು.