image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸೌಜನ್ಯ ಮಹಿಳಾ ಮಂಡಲದಲ್ಲಿ ಮಹಿಳೆಯರ ಆರೋಗ್ಯ ಮಾಹಿತಿ ಕಾರ್ಯಕ್ರಮ: ಮಾನಸಿಕ, ದೈಹಿಕ ಆರೋಗ್ಯದ ಕಡೆಗೆ ಗಮನಹರಿಸಲು ಡಾ. ಪ್ರತಿಭಾ ರೈ ಕರೆ

ಸೌಜನ್ಯ ಮಹಿಳಾ ಮಂಡಲದಲ್ಲಿ ಮಹಿಳೆಯರ ಆರೋಗ್ಯ ಮಾಹಿತಿ ಕಾರ್ಯಕ್ರಮ: ಮಾನಸಿಕ, ದೈಹಿಕ ಆರೋಗ್ಯದ ಕಡೆಗೆ ಗಮನಹರಿಸಲು ಡಾ. ಪ್ರತಿಭಾ ರೈ ಕರೆ

ಮಂಗಳೂರು : ಮಂಗಳೂರಿನ ಉರ್ವ ಹೊಯ್ಗೆಬೈಲ್‌ನ ಸೌಜನ್ಯ ಮಹಿಳಾ ಮಂಡಲ (ರಿ.) ವತಿಯಿಂದ ಜೂನ್ 24 ರಂದು ಬೈಕಾಡಿಯ "ಮಂಜೂಷಾ" ನಿವಾಸದಲ್ಲಿ ಮಹಿಳೆಯರಿಗಾಗಿ ವಿಶೇಷ "ಮಹಿಳೆಯರ ಆರೋಗ್ಯ ಮಾಹಿತಿ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಪ್ರಸಿದ್ಧ ಆಯುರ್ವೇದ ತಜ್ಞೆ ಡಾ. ಪ್ರತಿಭಾ ರೈ ಅವರು, ಮಹಿಳೆಯರು ಕೇವಲ ಭಾವನಾತ್ಮಕ ಕಾರಣಗಳಿಗಾಗಿ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸಬಾರದು ಎಂದು ಕಿವಿಮಾತು ಹೇಳಿದರು. ಉತ್ತಮ ಆಹಾರ ಪದ್ಧತಿ, ನಿಯಮಿತ ನಿದ್ದೆ ಮತ್ತು ನಿತ್ಯ ವ್ಯಾಯಾಮದ ಮೂಲಕ ಪ್ರತಿಯೊಬ್ಬ ಮಹಿಳೆಯೂ ತನ್ನ ದೇಹದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಮನವರಿಕೆ ಮಾಡಿಕೊಟ್ಟರು. ಮಾಹಿತಿ ಕಾರ್ಯಕ್ರಮದ ನಂತರ ಸಭಿಕರ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಪ್ರಶ್ನೆಗಳಿಗೆ ಸೂಕ್ತ ಸಲಹೆ ಮತ್ತು ಉತ್ತರಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಯಶಸ್ವಿ ಮುದ್ರೆ ಒತ್ತಿದರು. ಇದೇ ಸಂದರ್ಭದಲ್ಲಿ ಡಾ. ಪ್ರತಿಭಾ ರೈ ಅವರನ್ನು ಮಹಿಳಾ ಮಂಡಲದ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಮಂಡಳಿಯ ಸಾಂಪ್ರದಾಯಿಕ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಸಮಾರಂಭದಲ್ಲಿ ಗೌರವಾಧ್ಯಕ್ಷೆ ಕೆ.ಎ. ರೋಣಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷೆ ರತ್ನಾವತಿ ಜೆ. ಬೈಕಾಡಿಯವರು ಅತಿಥಿಗಳನ್ನು ಪರಿಚಯಿಸಿ, ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ಕಾರ್ಯದರ್ಶಿ ರಾಜೇಶ್ವರಿಯವರು ವಂದನಾರ್ಪಣೆ ಮಾಡಿದರು.

Category
ಕರಾವಳಿ ತರಂಗಿಣಿ