image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅದ್ಧೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಮಂಗಳೂರು

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅದ್ಧೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಮಂಗಳೂರು

ಮಂಗಳೂರು:  ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪಾಲ್ಗೊಂಡು ಕರಾವಳಿಯ ಜನತೆಯನ್ನು ಮಂತ್ರಮುಗ್ಧರನ್ನಾಗಿಸಿದರು. ನಗರದ ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆಯಾದ 'ರೋಹನ್ ಕಾರ್ಪೊರೇಷನ್' ಈ ಸಮಾರಂಭವನ್ನು ಆಯೋಜಿಸಿತ್ತು.

 ಕಾರ್ಯಕ್ರಮದ ಪ್ರಾರಂಭದಲ್ಲಿ ಕರಾವಳಿಯ ಕಲಾ ತಂಡಗಳಿಂದ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು. ನಂತರ 'ಇಂಡಿಯನ್ ಐಡಲ್' ವಿಜೇತ ಗಾಯಕ ಸಲ್ಮಾನ್ ಅಲಿ ತಮ್ಮ ಗಾಯನದ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಇದೇ ಸಂದರ್ಭದಲ್ಲಿ ರೋಹನ್ ಕಾರ್ಪೊರೇಷನ್‌ನ ಮಹತ್ವಾಕಾಂಕ್ಷೆಯ ವಾಟರ್‌ಫ್ರಂಟ್ ವಸತಿ ಯೋಜನೆ 'ರೋಹನ್ ಮರೀನಾ ಒನ್'ಗೆ ಶಾರುಖ್ ಖಾನ್ ಸಮ್ಮುಖದಲ್ಲಿ ಮರುಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೋಹನ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ರೋಹನ್ ಮೊಂತೇರೊ, ಶಾರುಖ್ ಖಾನ್ ಅವರ ಸಾಮಾನ್ಯ ಜೀವನದಿಂದ ಜಾಗತಿಕ ತಾರೆಯಾಗಿ ಬೆಳೆದ ಪಯಣ ಕೋಟ್ಯಂತರ ಜನರಿಗೆ ಸ್ಪೂರ್ತಿಯಾಗಿದೆ ಎಂದು ತಿಳಿಸಿದರು. ನಿರ್ದೇಶಕ ಡಯೋನ್ ಮೊಂತೇರೊ ಅವರು, ಶಾರುಖ್ ಖಾನ್ ಅವರ ಉಪಸ್ಥಿತಿ ಸಂಸ್ಥೆಯ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಶಾರುಖ್ ಖಾನ್ ಅವರು ಡಾ. ರೋಹನ್ ಮೊಂತೇರೊ ಮತ್ತು ಡಯೋನ್ ಮೊಂತೇರೊ ಅವರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅವರು, "ನಮಸ್ಕಾರ ಕುಡ್ಲಾ.., ಎಂಚ ಉಲ್ಲಾರ್" ಎಂದು ಮಾತು ಆರಂಭಿಸಿ, ಮಂಗಳೂರಿನಲ್ಲಿ ತಮ್ಮ ಅಜ್ಜನ ಮನೆಯಲ್ಲಿ ಕಳೆದ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಅಲ್ಲದೆ, ಯುವಜನತೆ ದೊಡ್ಡ ಕನಸುಗಳನ್ನು ಕಾಣಬೇಕು, ಕಠಿಣ ಪರಿಶ್ರಮ ಪಡಬೇಕು ಮತ್ತು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು ಎಂದು ಕರೆ ನೀಡಿದರು. ಸಾಹಿಲ್ ರುಹೀರ್ ಮತ್ತು ಆರ್.ಜೆ ಡೋನಾ ಈ ಕಾರ್ಯಕ್ರಮವನ್ನು ನಿರೂಪಿಸಿದರು.

1994ರಲ್ಲಿ ಸ್ಥಾಪನೆಯಾದ ರೋಹನ್ ಕಾರ್ಪೊರೇಷನ್ ಕಳೆದ ಮೂರು ದಶಕಗಳಲ್ಲಿ 25ಕ್ಕೂ ಹೆಚ್ಚು ಪ್ರಮುಖ ಯೋಜನೆಗಳನ್ನು ಪೂರ್ಣಗೊಳಿಸಿದ್ದು, 7,000ಕ್ಕೂ ಹೆಚ್ಚು ಕುಟುಂಬಗಳ ನಂಬಿಕೆಗೆ ಪಾತ್ರವಾಗಿದೆ.

Category
ಕರಾವಳಿ ತರಂಗಿಣಿ