ಮಂಗಳೂರು : ಸುಮಾರು 122 ವರ್ಷಗಳ ಇತಿಹಾಸವಿರುವ ರಾಷ್ಟ್ರದ ಸಹಕಾರ ಚಳುವಳಿಗೆ ಪೂರಕವಾಗಿ ಸ್ಥಾಪಿಸಲಾಗಿರುವ ಕೇಂದ್ರ ಸಹಕಾರ ಸಚಿವಾಲಯವು ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಜೂನ್ 29ರಿಂದ ಜುಲೈ 6ರವರೆಗೆ ವಿಶೇಷ ಸಹಕಾರ ಸಪ್ತಾಹವನ್ನು ದೇಶಾದ್ಯಂತ ಆಚರಿಸಲು ಕೇಂದ್ರ ಸಹಕಾರ ಸಚಿವಾಲಯವು ನಿರ್ಧರಿಸಿದೆ. ಅದರಂತೆ ಜೂನ್ 29ರಂದು ಬೆಳಿಗ್ಗೆ 10:30ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ 'ಸಹಕಾರದಿಂದ ಸಮೃದ್ಧಿ' ಎಂಬ ಧೇಯವಾಕ್ಯದೊಂದಿಗೆ ವಿಶೇಷ ಸಹಕಾರ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮವು ನಡೆಯಲಿದೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಸಂಸದ ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಶಾಸಕ ವೇದವ್ಯಾಸ ಕಾಮತ್ ಅವರು ಸಹಕಾರ ಸಪ್ತಾಹದ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಜಯಕರ ಶೆಟ್ಟಿ ಬಿ. ಇಂದ್ರಾಳಿ ಹಾಗೂ ದ.ಕ. ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್. ರಮೇಶ್ ಅವರು ಭಾಗವಹಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಹಾಗೂ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.