image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪದವಿ ಪೂರ್ವ ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ನಿಯೋಜಿಸುವ ಸರಕಾರದ ಕರಡು ತಿದ್ದುಪಡಿಗೆ ತೀವ್ರ ವಿರೋಧ

ಪದವಿ ಪೂರ್ವ ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ನಿಯೋಜಿಸುವ ಸರಕಾರದ ಕರಡು ತಿದ್ದುಪಡಿಗೆ ತೀವ್ರ ವಿರೋಧ

ಮಂಗಳೂರು: ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ನೇರ ನೇಮಕಾತಿ ಮತ್ತು ಬಡ್ತಿ ಹೊಂದಿದ ಉಪನ್ಯಾಸಕರನ್ನು 9 ಮತ್ತು 10ನೇ ತರಗತಿಗಳಿಗೆ ಬೋಧನೆಗೆ ನಿಯೋಜಿಸುವ ಸಂಬಂಧ 2026ರಲ್ಲಿ ಪ್ರಸ್ತಾಪಿಸಲಾದ ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) ನೇಮಕಾತಿ ನಿಯಮಗಳ ಕರಡು ತಿದ್ದುಪಡಿಯನ್ನು ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಿನ್ಸಿಪಾಲ್‌ಗಳ ಸಂಘ ಹಾಗೂ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿವೆ.

​ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪ್ರಿನ್ಸಿಪಾಲ್‌ಗಳ ಸಂಘದ ಅಧ್ಯಕ್ಷ ಡಾ. ನವೀನ್ ಶೆಟ್ಟಿ ಕೆ., ರಾಜ್ಯದಲ್ಲಿ ಶಾಲಾ ಶಿಕ್ಷಣ ಪುನರ್‌ರಚನೆ (ಎಸ್‌ಇಪಿ) ಜಾರಿಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಅವಸರದ ನಿಯಮ ಬದಲಾವಣೆಯ ಅಗತ್ಯವಿಲ್ಲ. ಶಿಕ್ಷಣ ತಜ್ಞರು, ಆಡಳಿತಾಧಿಕಾರಿಗಳು ಹಾಗೂ ಬೋಧಕರನ್ನೊಳಗೊಂಡ ಸಮಿತಿಯನ್ನು ರಚಿಸಿ, ಸಮಗ್ರ ಚರ್ಚೆಯ ಬಳಿಕವೇ ನಿರ್ಧಾರ ಕೈಗೊಳ್ಳಬೇಕು. ಶಿಕ್ಷಣ ಸಂಸ್ಥೆಗಳ ನೇಮಕಾತಿ, ಪಠ್ಯಕ್ರಮ ಮತ್ತು ಬೋಧನಾ ಕ್ರಮದಲ್ಲಿ ಏಕರೂಪತೆ ಇಲ್ಲದೆ ಕೇವಲ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಈ ನಿಯಮ ಅನ್ವಯಿಸುವುದು ಶಿಕ್ಷಣ ವ್ಯವಸ್ಥೆಯ ಸಮತೋಲನಕ್ಕೆ ಧಕ್ಕೆ ತರಲಿದೆ ಎಂದು ಎಚ್ಚರಿಸಿದರು. ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಅವರು ಘೋಷಿಸಿದರು.
​ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಂಟಿ ಕಾರ್ಯದರ್ಶಿ ವಿಠಲ್ ಮಾತನಾಡಿ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣದ ಬೋಧನಾ ವಿಧಾನಗಳು ಸಂಪೂರ್ಣ ಭಿನ್ನವಾಗಿವೆ. ಬಡ್ತಿ ಪಡೆದ ಉಪನ್ಯಾಸಕರನ್ನು ಪುನಃ 9 ಮತ್ತು 10ನೇ ತರಗತಿಗಳಿಗೆ ನಿಯೋಜಿಸುವುದು ಬಡ್ತಿಯ ಉದ್ದೇಶವನ್ನೇ ನಿರರ್ಥಕಗೊಳಿಸುತ್ತದೆ. ಕಾರ್ಯಭಾರ ಸಮತೋಲನದ ಹೆಸರಿನಲ್ಲಿ ಉಪನ್ಯಾಸಕರನ್ನು ನಾನಾ ಕಾಲೇಜುಗಳಿಗೆ ನಿಯೋಜಿಸುವ ಕ್ರಮದಿಂದ ವಿದ್ಯಾರ್ಥಿಗಳು ವಿಷಯದ ಆಳವಾದ ಅಧ್ಯಯನದಿಂದ ವಂಚಿತರಾಗಲಿದ್ದಾರೆ. ಇದು ಶಿಕ್ಷಣದ ಗುಣಮಟ್ಟ ಮತ್ತು ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರಕಾರ ಕರಡು ತಿದ್ದುಪಡಿಯನ್ನು ಕೈಬಿಟ್ಟು, ಉಪನ್ಯಾಸಕರ ಕಾರ್ಯಭಾರಕ್ಕಿಂತ ವಿದ್ಯಾರ್ಥಿ ಕೇಂದ್ರಿತ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವ ನೀತಿಯನ್ನು ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಿಯು ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಹರಿಪ್ರಕಾಶ್ ಬಿ., ಪ್ರಿನ್ಸಿಪಾಲ್‌ಗಳ ಸಂಘದ ಕಾರ್ಯದರ್ಶಿ ಶೀನಪ್ಪ, ಖಜಾಂಚಿ ಸಚಿತ್ ಸುವರ್ಣ ಮತ್ತು ಪ್ರತಿನಿಧಿ ಸೀಮಾ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ