ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿರುವ 'ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ)', ಇದೇ ವೇಳೆ ಸಮಾಜದ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ , ನೂತನ ಮುಖ್ಯಮಂತ್ರಿಗಳಿಗೆ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅದರೊಂದಿಗೆ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಕೋರಲಾಗಿದೆ. ಕಳೆದ ಸರ್ಕಾರಗಳಲ್ಲಿ ಸಮಾಜಕ್ಕೆ ಕನಿಷ್ಠ ಇಬ್ಬರು ಸಚಿವರ ಸ್ಥಾನ ಲಭಿಸುತ್ತಿತ್ತು, ಆದರೆ 2023ರ ಪ್ರಸ್ತುತ ಸರ್ಕಾರದಲ್ಲಿ ಈ ಸಂಖ್ಯೆ ಒಂದಕ್ಕೆ ಇಳಿಕೆಯಾಗಿದೆ. ಹೀಗಾಗಿ, ಸರ್ಕಾರದ ಅವಧಿಯ ಉಳಿದ ಒಂದೂವರೆ ವರ್ಷದಲ್ಲಿ ಸಮಾಜದ ಕನಿಷ್ಠ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ವೇದಿಕೆಯು ಆಗ್ರಹಿಸಿದೆ.
ಅಲ್ಲದೆ, ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿರುವ ಸಂಘಟನೆಯು, ನಿಗಮ ರಚನೆಯಾಗಿ ಮೂರು ವರ್ಷಗಳಾದರೂ ಇಲ್ಲಿಯವರೆಗೆ ಯಾವುದೇ ಆರ್ಥಿಕ ಅನುದಾನ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದೆ. ವಾರ್ಷಿಕ 500 ಕೋಟಿ ರೂಪಾಯಿಯಂತೆ ಒಟ್ಟು 1,500 ಕೋಟಿ ರೂಪಾಯಿ ಅನುದಾನ ನೀಡುವ ಭರವಸೆಯನ್ನು ಸರ್ಕಾರ ಈಡೇರಿಸಬೇಕೆಂದು ಮನವಿ ಮಾಡಿದೆ.
ಸಮಾಜದ ಬೇಡಿಕೆಗಳು ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯು ಎಚ್ಚರಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ಸಂದೀಪ್ ಪಂಚವೆಲ್, ಎಂ. ಕೆ. ಪ್ರಸಾದ್, ದಿನೇಶ್ ಕುಮಾರ್ ರಾಯಿ, ಲಕ್ಷ್ಮೀಶ್ ಸುವರ್ಣ ಮತ್ತು ನವೀನ್ ಕೋಟ್ಯಾನ್ ಸೇರಿದಂತೆ ವೇದಿಕೆಯ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.