ಮಂಗಳೂರು: ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಭಾಗವಹಿಸಲಿರುವ ಬಹುನಿರೀಕ್ಷಿತ 'ಆನ್ ಈವ್ನಿಂಗ್ ವಿತ್ ಶಾರುಖ್ ಖಾನ್' ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಆಯೋಜಕರಾದ ರೋಹನ್ ಕಾರ್ಪೊರೇಷನ್ ಸಂಸ್ಥೆಯು ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗಾಗಿ ಅಗತ್ಯ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಕಾರ್ಯಕ್ರಮದ ಸುಗಮ ಹಾಗೂ ಸುರಕ್ಷಿತ ನಿರ್ವಹಣೆಗಾಗಿ ಎಲ್ಲ ಅತಿಥಿಗಳು ಸಮಯಪಾಲನೆ ಮಾಡುವುದು ಕಡ್ಡಾಯವಾಗಿದ್ದು, ಸಂಜೆ 4:30 ಗಂಟೆಗೆ ಪ್ರವೇಶ ದ್ವಾರಗಳನ್ನು ಮುಚ್ಚಲಾಗುವುದು ಎಂದು ತಿಳಿಸಲಾಗಿದೆ. ಯಾವುದೇ ಅಸೌಕರ್ಯವನ್ನು ತಪ್ಪಿಸಲು ಸಾರ್ವಜನಿಕರು ಸಮಯಕ್ಕಿಂತ ಮುಂಚಿತವಾಗಿ ಆಗಮಿಸಬೇಕು. ಕಾರ್ಯಕ್ರಮಕ್ಕೆ ಪೂರ್ವ ನೋಂದಣಿ ಮಾಡಿಕೊಂಡಿರುವ ಆಹ್ವಾನಿತರಿಗೆ ಮಾತ್ರ ಪ್ರವೇಶ ಅವಕಾಶವಿದ್ದು, ಮಾನ್ಯವಾದ ಪ್ರವೇಶ ಪಾಸ್‌ನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕಾಗುತ್ತದೆ. ಈ ಪ್ರವೇಶ ಪಾಸ್‌ಗಳು ವೈಯಕ್ತಿಕ ಬಳಕೆಗೆ ಮಾತ್ರ ಮಾನ್ಯವಾಗಿದ್ದು, ಅವುಗಳನ್ನು ಹಂಚಿಕೆ ಮಾಡುವುದು, ವರ್ಗಾಯಿಸುವುದು, ವಿನಿಮಯ ಮಾಡಿಕೊಳ್ಳುವುದು ಅಥವಾ ಮರುಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಕಾರ್ಯಕ್ರಮದ ಅವಧಿಯಲ್ಲಿ ನಾಗರಿಕ ಪ್ರಜ್ಞೆ, ಶಿಸ್ತು ಮತ್ತು ಪರಸ್ಪರ ಗೌರವವನ್ನು ಕಾಪಾಡಿಕೊಳ್ಳಬೇಕು ಹಾಗೂ ಕಾರ್ಯಕ್ರಮ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋರಲಾಗಿದೆ. ಜಗಳ, ಅಸಭ್ಯ ವರ್ತನೆ, ಗದ್ದಲ ಅಥವಾ ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡುವ ಯಾವುದೇ ಚಟುವಟಿಕೆಗಳಿಗೆ ಆಸ್ಪದವಿಲ್ಲ. ಪ್ರವೇಶ ದ್ವಾರಗಳು, ಬ್ಯಾರಿಕೇಡ್‌ಗಳು ಹಾಗೂ ನಿರ್ಬಂಧಿತ ಪ್ರದೇಶಗಳಿಗೆ ಹಾನಿ ಉಂಟುಮಾಡುವುದು, ಅವುಗಳನ್ನು ದಾಟಲು ಪ್ರಯತ್ನಿಸುವುದು ಅಥವಾ ಅನಧಿಕೃತ ಪ್ರವೇಶ ಪಡೆಯಲು ಯತ್ನಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯೋಜಕರು ಎಚ್ಚರಿಸಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳವು ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿರುವುದರಿಂದ, ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಸಹಕರಿಸಲು ವಿನಂತಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸಾಮಾನ್ಯ ಅತಿಥಿಗಳ ವಾಹನ ನಿಲುಗಡೆಯನ್ನು ಸಹ್ಯಾದ್ರಿ ಕಾಲೇಜಿನಲ್ಲಿ ಹಾಗೂ ವಿಶೇಷ ಅತಿಥಿಗಳ ವಾಹನ ನಿಲುಗಡೆ ವ್ಯವಸ್ಥೆಯನ್ನು ಕಾರ್ಯಕ್ರಮ ಸ್ಥಳದ ಸಮೀಪ ಕಲ್ಪಿಸಲಾಗಿದೆ. ಅತಿಥಿಗಳು ನಿಗದಿತ ವಾಹನ ನಿಲುಗಡೆ ಪ್ರದೇಶಗಳನ್ನೇ ಬಳಸಬೇಕಾಗುತ್ತದೆ. ಭದ್ರತಾ ಸಿಬ್ಬಂದಿ, ಸ್ವಯಂಸೇವಕರು ಹಾಗೂ ಕಾರ್ಯಕ್ರಮ ನಿರ್ವಹಣಾ ತಂಡದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದ್ದು, ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಪ್ರವೇಶ ನಿರಾಕರಿಸುವ ಅಥವಾ ಕಾರ್ಯಕ್ರಮ ಸ್ಥಳದಿಂದ ತೆರವುಗೊಳಿಸುವ ಸಂಪೂರ್ಣ ಹಕ್ಕನ್ನು ರೋಹನ್ ಕಾರ್ಪೊರೇಷನ್ ಕಾಯ್ದಿರಿಸಿಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.