image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಡಾ. ರವಿಪ್ರಸಾದ ಹೆಗ್ಡೆ ಕರೆ

ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಡಾ. ರವಿಪ್ರಸಾದ ಹೆಗ್ಡೆ ಕರೆ

ಮೂಡುಬಿದಿರೆ: ಯುವಜನರು ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿತ್ವದ ಜೊತೆಗೆ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ರವಿಪ್ರಸಾದ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರ್ಕಾರದ ‘ನಶಾಮುಕ್ತ ಭಾರತ್ ಅಭಿಯಾನ’ದ ಅಂಗವಾಗಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಾದಕ ವಸ್ತು ನಿಯಂತ್ರಣ ಸಮಿತಿ ವತಿಯಿಂದ ಆಯೋಜಿಸಿದ್ದ 'ಮಾದಕ ವಸ್ತುಗಳ ದುಷ್ಪರಿಣಾಮಗಳು ಮತ್ತು ವ್ಯಸನಮುಕ್ತ ಜೀವನ' ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

​ಮಾದಕ ವ್ಯಸನವು ಹೊಸ ಸಮಸ್ಯೆಯಲ್ಲದಿದ್ದರೂ, ಇತ್ತೀಚಿನ ದಿನಗಳಲ್ಲಿ ಅದರ ಸ್ವರೂಪ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಎಚ್ಚರಿಸಿದ ಅವರು, ಸ್ನೇಹಿತರ ಒತ್ತಡ ಅಥವಾ ಕ್ಷಣಿಕ ಸುಖಕ್ಕಾಗಿ ಪ್ರಾರಂಭವಾಗುವ ಈ ಚಟಗಳು ಕ್ರಮೇಣ ವ್ಯಕ್ತಿಯ ಆರೋಗ್ಯ, ಶಿಕ್ಷಣ, ವೃತ್ತಿ ಹಾಗೂ ಕುಟುಂಬ ಜೀವನವನ್ನೇ ನಾಶಮಾಡುತ್ತವೆ ಎಂದರು. ವಿಷ ಸೇವಿಸಿದರೆ ಕ್ಷಣಮಾತ್ರದಲ್ಲಿ ಜೀವ ಹೋಗಬಹುದು, ಆದರೆ ಮಾದಕ ವಸ್ತುಗಳ ವ್ಯಸನವು ವ್ಯಕ್ತಿಯನ್ನು ನಿಧಾನವಾಗಿ ಸಾವಿನತ್ತ ತಳ್ಳುತ್ತದೆ. ವ್ಯಸನಕ್ಕೊಳಗಾದ ನಂತರ ಅದರಿಂದ ಹೊರಬರುವುದು ಬಹಳ ಕಷ್ಟಕರವಾದ್ದರಿಂದ, ಯುವಕರು ಯಾವುದೇ ಕಾರಣಕ್ಕೂ ವ್ಯಸನಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳಬಾರದು ಅಥವಾ ಪ್ರಯೋಗಕ್ಕೆ ಮುಂದಾಗಬಾರದು ಎಂದು ಕಿವಿಮಾತು ಹೇಳಿದರು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್ ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ವೈಯಕ್ತಿಕ ಸಂಕಲ್ಪದಿಂದಲೇ ಸಾಧ್ಯ. ಕುಟುಂಬ ಸರಿಯಾದರೆ ಸಮಾಜ ಮತ್ತು ದೇಶ ಉತ್ತಮ ದಿಕ್ಕಿನಲ್ಲಿ ಸಾಗುತ್ತದೆ. ಯಾವುದೇ ಮಾದಕ ವಸ್ತುವನ್ನು ತಿರಸ್ಕರಿಸುವುದು ದೌರ್ಬಲ್ಯವಲ್ಲ, ಬದಲಾಗಿ ಅದು ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವದ ಬಲದ ಸಂಕೇತವಾಗಿದೆ ಎಂದು ತಿಳಿಸಿದರು. 20 ರಿಂದ 21 ವರ್ಷದೊಳಗಿನ ಯುವಕರು ವ್ಯಸನದತ್ತ ಆಕರ್ಷಿತರಾಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಗಮನಹರಿಸಿ ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

​ಈ ಸಂದರ್ಭದಲ್ಲಿ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ‘ನಶಾಮುಕ್ತ ಭಾರತ್’ ಪ್ರತಿಜ್ಞೆ ಬೋಧಿಸಿದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., ಕಾರ್ಯಕ್ರಮ ಸಂಯೋಜಕ ಟಿ.ಎ.ಎನ್. ಖಂಡಿಗೆ ಉಪಸ್ಥಿತರಿದ್ದರು. ಜೇಸನ್ ಕ್ಯಾಸ್ಟಿಲಿನೋ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ