ಮಂಗಳೂರು: ಕಳೆದ ವರ್ಷ ಮಂಜನಾಡಿಯಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಇಡೀ ಕುಟುಂಬವನ್ನೇ ಕಳೆದುಕೊಂಡು, ಸ್ವತಃ ಅಂಗವೈಕಲ್ಯಕ್ಕೆ ತುತ್ತಾಗಿ ಅತೀವ ಸಂಕಷ್ಟದಲ್ಲಿರುವ ಅಶ್ವಿನಿ ಎಂಬವರ ಮನೆಗೆ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಭೇಟಿ ನೀಡಿ ಸಾಂತ್ವನ ಹೇಳಿದರು.
ಭಾರಿ ಮಳೆಯಿಂದ ಸಂಭವಿಸಿದ ಗುಡ್ಡ ಕುಸಿತದ ದುರಂತದಲ್ಲಿ ಅಶ್ವಿನಿ ಅವರು ತಮ್ಮಿಬ್ಬರು ಮಕ್ಕಳು ಮತ್ತು ಅತ್ತೆಯನ್ನು ಕಳೆದುಕೊಂಡಿದ್ದರು. ಇದಲ್ಲದೆ, ಸ್ವತಃ ಅಶ್ವಿನಿ ಅವರು ಎರಡೂ ಕಾಲುಗಳನ್ನು ಹಾಗೂ ಅವರ ಮಾವ ಒಂದು ಕಾಲನ್ನು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಸಂತ್ರಸ್ತೆಯ ಕಣ್ಣೀರು ಒರೆಸಿದ ಶಾಸಕರು, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕುಟುಂಬಕ್ಕೆ ವೈಯಕ್ತಿಕವಾಗಿ ಹಾಗೂ ಸರ್ಕಾರದ ಮಟ್ಟದಲ್ಲಿ ಸಂಪೂರ್ಣ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದರು. ನೀವು ಒಂಟಿಯಲ್ಲ, ನಿಮ್ಮ ಮುಂದಿನ ಬದುಕು ಹಾಗೂ ಸರ್ಕಾರದಿಂದ ಸಿಗಬೇಕಾದ ಸೂಕ್ತ ಪರಿಹಾರ ಮತ್ತು ಪುನರ್ವಸತಿಗಾಗಿ ನಡೆಯುವ ಪ್ರತಿಯೊಂದು ಹೋರಾಟದಲ್ಲೂ ನಾನು ನಿಮ್ಮ ಜೊತೆಗಿದ್ದೇನೆ ಎಂದು ಕಿಶೋರ್ ಕುಮಾರ್ ಭರವಸೆ ನೀಡಿದರು.
ಅಲ್ಲದೆ, ಅಶ್ವಿನಿ ಅವರ ವೈದ್ಯಕೀಯ ವೆಚ್ಚಗಳು ಮತ್ತು ಜೀವನ ನಿರ್ವಹಣೆಗಾಗಿ ಜಿಲ್ಲಾಡಳಿತದಿಂದ ಸಿಗಬೇಕಾದ ಸೌಲಭ್ಯಗಳನ್ನು ತುರ್ತಾಗಿ ಒದಗಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಕುವತ್ತಬೈಲ್, ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ದಯಾನಂದ ತೊಕ್ಕೊಟ್ಟು, ಮೋಹನ್ ರಾಜ್ ಕೆ.ಆರ್., ಯುವಮೋರ್ಚಾ ಅಧ್ಯಕ್ಷ ಮುರಳಿ ಕೊಣಾಜೆ, ರೈತಮೋರ್ಚಾ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಮಂಡಲ ಕೋಶಾಧಿಕಾರಿ ಸುಮಲತಾ ಕೊಣಾಜೆ ಹಾಗೂ ಶಕ್ತಿ ಕೇಂದ್ರ ಪ್ರಮುಖ್ ಸುಧಾಕರ ಗಟ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.