ಮಂಗಳೂರು: ಭಾರತದ ಏಕತೆ ಮತ್ತು ಅಖಂಡತೆಯನ್ನು ಉಳಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಜನಸಂಘದ ಸ್ಥಾಪಕ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನವನ್ನು ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ವತಿಯಿಂದ ನಗರದ ಅಟಲ್ ಸೇವಾ ಕೇಂದ್ರದಲ್ಲಿ ಭಕ್ತಿಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಮುಖರ್ಜಿ ಅವರನ್ನು ಕೇವಲ ಜನಸಂಘದ ಸಂಸ್ಥಾಪಕರೆಂದು ಸ್ಮರಿಸುವುದಷ್ಟೇ ಅಲ್ಲ, ಬದಲಾಗಿ ಭಾರತದ ಏಕತೆಯ ರಕ್ಷಣೆಗಾಗಿ, ಬಂಗಾಳ ಹಾಗೂ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಉಳಿಸಿಕೊಳ್ಳಲು ಅವರು ನಡೆಸಿದ ಮಹತ್ತರ ಹೋರಾಟಗಳನ್ನು ನೆನಪಿಸಿಕೊಳ್ಳಬೇಕು ಎಂದರು. ಜಮ್ಮು ಕಾಶ್ಮೀರದ 370ನೇ ವಿಧಿಯು ಅವರ ಬಲಿದಾನಕ್ಕೆ ಪ್ರಮುಖ ಕಾರಣವಾಗಿತ್ತು. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಆ ವಿಧಿಯನ್ನು ರದ್ದುಗೊಳಿಸುವ ಮೂಲಕ ಮುಖರ್ಜಿ ಅವರ ಕನಸನ್ನು ನನಸು ಮಾಡಿದೆ. ಅವರು ಹಾಕಿಕೊಟ್ಟ ರಾಷ್ಟ್ರಪರ ಆದರ್ಶಗಳು ಪ್ರತಿಯೊಬ್ಬ ಕಾರ್ಯಕರ್ತನಿಗೂ ದಾರಿ ದೀಪವಾಗಿವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆಯ ನಿಕಟಪೂರ್ವ ಸದಸ್ಯರುಗಳು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳು ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.