image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಲಿನ ಆಶಾಕಿರಣ ‘ಎಜುಕಾರುಣ್ಯ’: ಜೂನ್ 26ರಂದು ದತ್ತಿನಿಧಿ ಪ್ರತಿಭಾ ಪುರಸ್ಕಾರ ವಿತರಣೆ

ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಲಿನ ಆಶಾಕಿರಣ ‘ಎಜುಕಾರುಣ್ಯ’: ಜೂನ್ 26ರಂದು ದತ್ತಿನಿಧಿ ಪ್ರತಿಭಾ ಪುರಸ್ಕಾರ ವಿತರಣೆ

ಮಂಗಳೂರು: ಆರ್ಥಿಕ ಸಂಕಷ್ಟದಿಂದ ಶಿಕ್ಷಣದಿಂದ ವಂಚಿತರಾಗುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆಸರೆಯಾಗಿ, ಅವರ ಶೈಕ್ಷಣಿಕ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ‘ಎಜುಕಾರುಣ್ಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್’ ಮಹತ್ವದ ಕಾರ್ಯ ಮಾಡುತ್ತಿದೆ. ಟ್ರಸ್ಟ್‌ನ ವತಿಯಿಂದ ಕಳೆದ ವರ್ಷ ಆರಂಭಿಸಲಾದ ದಿ. ಗುರುವಪ್ಪ ಎನ್.ಟಿ. ಬಾಳೆಪುಣಿ ಅವರ ಸ್ಮರಣಾರ್ಥ ದತ್ತಿನಿಧಿ ಪ್ರತಿಭಾ ಪುರಸ್ಕಾರದ ಎರಡನೇ ವರ್ಷದ ಕಾರ್ಯಕ್ರಮವು ಜೂನ್ 26ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಮೋಹನ್‌ದಾಸ್ ಮರಕಡ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ,ನಮ್ಮ (ಮೋಹನ್‌ದಾಸ್ ಮರಕಡ ಮತ್ತು ಬಬಿತಾ ಎಂ. ಮರಕಡ ದಂಪತಿ) ಪುತ್ರಿ ಕಾರುಣ್ಯವಾರಿಧಿ ಅವರ ನಾಲ್ಕನೇ ಜನ್ಮದಿನದ ಅಂಗವಾಗಿ ಆರಂಭವಾದ ಈ ಯೋಜನೆ, ಇಂದು 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ದಾರಿದೀಪವಾಗಿದೆ. ಕೇವಲ ಬೋಧನಾ ಶುಲ್ಕವಷ್ಟೇ ಅಲ್ಲದೆ, ಸಮವಸ್ತ್ರ, ಪುಸ್ತಕಗಳು ಮತ್ತು ಕೆಲವು ವಿದ್ಯಾರ್ಥಿಗಳ ಬಸ್ ಶುಲ್ಕವನ್ನು ಭರಿಸುವ ಮೂಲಕ ಸಂಪೂರ್ಣ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯನ್ನು ಟ್ರಸ್ಟ್ ನಿರ್ವಹಿಸುತ್ತಿದೆ. ವಾರ್ಷಿಕ ಸುಮಾರು ಎಂಟು ಲಕ್ಷ ರೂಪಾಯಿಗಳನ್ನು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಟ್ರಸ್ಟ್ ವಿನಿಯೋಗಿಸುತ್ತಿದೆ.

​ಈ ಬಾರಿಯ ಬಾಳೆಪುಣಿ ದತ್ತಿನಿಧಿಯನ್ನು ಒಟ್ಟು ಆರು ಮಂದಿ ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ. ಕಳೆದ ವರ್ಷ ದತ್ತಿನಿಧಿ ಪಡೆದ ಧೃತಿ ಕುಂಜತ್ತಬೈಲ್ ಮತ್ತು ಮೇಘಾ ಸಜಿಪ ಅವರಿಗೆ ಈ ವರ್ಷವೂ ಪ್ರೋತ್ಸಾಹ ಮುಂದುವರಿಸಲಾಗುತ್ತಿದೆ.
ಇದರೊಂದಿಗೆ ತ್ರಿಷಾ ಪಚ್ಚನಾಡಿ, ಶ್ರೀಜಾ ಶೆಟ್ಟಿ, ಶೋಭಿತಾ, ಪ್ರಾಪ್ತಿ, ಶ್ರೇಯಾ ಮತ್ತು ರಶ್ಮಿತ್ ಅವರಿಗೆ ಒಟ್ಟು 1.50 ಲಕ್ಷ ರೂಪಾಯಿ ಮೊತ್ತದ ದತ್ತಿನಿಧಿಯನ್ನು ನೀಡಲಾಗುತ್ತಿದೆ.
​ಜೂನ್ 26ರಂದು ನಡೆಯಲಿರುವ ಈ ಕಾರ್ಯಕ್ರಮವನ್ನು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ.

ಉದ್ಯಮಿ ರಾಧಾಕೃಷ್ಣ ಉಮಿಯ ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ವಿಶೇಷ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದು, ನರಿಂಗಾನ ಕಂಬಳೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಕಾಜವ ಅವರು ದತ್ತಿನಿಧಿಯನ್ನು ಹಸ್ತಾಂತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಿಶಿತ್ ಪೂಜಾರಿ, ಖಾದರ್ ಶಾ, ಪಿ.ಬಿ. ಹರೀಶ್ ರೈ, ಅನ್ನು ಮಂಗಳೂರು ಹಾಗೂ ಪುಷ್ಪರಾಜ್ ಬಿ.ಎನ್. ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. 

​ಪತ್ರಿಕಾಗೋಷ್ಠಿಯಲ್ಲಿ  ಪ್ರಧಾನ ಕಾರ್ಯದರ್ಶಿ ರಮೇಶ್‌ ಶೆಟ್ಟಿ ವಿವೇಕನಗರ, ಟ್ರಸ್ಟಿಗಳಾದ ಪ್ರಶಾಂತ್ ಅಬ್ಬೆಟ್ಟು, ದಿನೇಶ್ ನಾಯ್ಕ್ ಹಾಗೂ ನವೀನ್ ಎಲ್.ಆರ್. ಗಾಂಧಿನಗರ, ಶ್ರೀಶಾ ಶೆಟ್ಟಿ ಅಬ್ಬೆಟ್ಟು ಮತ್ತು ಮೇಘಾ ಸಜಿಪ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ