image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾಮುಕ ಸತ್ತಾರ್ ಕೈ ಕಡಿಯುವ ಬದಲು ತಲೆ ಕಡಿಯಬೇಕಿತ್ತು-ಪ್ರತಿಭಾ ಕುಳಾಯಿ

ಕಾಮುಕ ಸತ್ತಾರ್ ಕೈ ಕಡಿಯುವ ಬದಲು ತಲೆ ಕಡಿಯಬೇಕಿತ್ತು-ಪ್ರತಿಭಾ ಕುಳಾಯಿ

ಸುರತ್ಕಲ್: ಮುಮ್ತಾಜ್ ಅಲಿ ಸಾವಿಗೆ ಕಾರಣನಾದ ಅಬ್ದುಲ್ ಸತ್ತಾರ್ ಜೈಲಿಂದ ಬರೋತನಕ ಕಾಯ್ಬೇಕು, ಅವನನ್ನು ಬದುಕಲು ಬಿಡಬಾರದು. ಆತ ನಾಗರಿಕ ಸಮಾಜದಲ್ಲಿರಲು ಯೋಗ್ಯನಲ್ಲ. ನಾವು ಇಂದು ಆತನನ್ನು ಬಿಟ್ಟರೆ ನಾಳೆಯ ದಿನ ಇನ್ನಷ್ಟು ಮಂದಿ ಕೂಳೂರು ಸೇತುವೆಯಿಂದ ಹಾರುವ ಸನ್ನಿವೇಶ ಬರಬಹುದು. ಆತನನ್ನು ಒಂದೊಮ್ಮೆ ನೀವು ಬಿಟ್ಟರೂ ನಾನು ಬಿಡುವುದಿಲ್ಲ. ಆತ ಜೈಲಿನಿಂದ ಹೊರಗೆ ಬರುವತನಕ ಕಾಯುತ್ತೇನೆ ಎಂದು ಕೆಪಿಸಿಸಿ ವಕ್ತಾರೆ ಪ್ರತಿಭಾ ಕುಳಾಯಿ ಗುಡುಗಿದ್ದಾರೆ. ಅವರು ಗುರುವಾರ ಸಂಜೆ ಸುರತ್ಕಲ್ ಜಂಕ್ಷನ್ ನಲ್ಲಿ ಮುಮ್ತಾಜ್ ಅಲಿ ಅಭಿಮಾನಿ ಬಳಗದಿಂದ ನಡೆದ ಬೃಹತ್ ಹಕ್ಕೊತ್ತಾಯ ಸಭೆಯನ್ನು ಉದ್ದೇಶಿಸಿ ಮಾತಾಡಿ,

“ಸತ್ತಾರ್ ನನಗೆ ಕೊಟ್ಟಿರುವ ಹಿಂಸೆ ಇನ್ಯಾರಿಗೂ ಕೊಡುವುದು ಬೇಡ. ನಾನೊಬ್ಬ ಹಿಂದೂ ಮಹಿಳೆಯಾಗಿದ್ದಕ್ಕೆ ಆತನನ್ನು ಎದುರಿಸಿ ಇನ್ನೂ ಗಂಡ ಮಕ್ಕಳ ಜೊತೆಗೆ ಬದುಕಿದ್ದೇನೆ. ಆತ ನನ್ನಿಂದ ಪೆಟ್ಟು ತಿಂದ ಮೇಲೂ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ನನ್ನ ಹಿಂದೆ ಬಂದು ನಿಂತು ಫೋಟೋ ತೆಗೆಸಿ ಹಾಕುತ್ತಿದ್ದ. ಆತನಿಗೆ 5 ತಿಂಗಳ ಹಿಂದೆ ನಾನೇ ಎಚ್ಚರಿಕೆ ಕೊಟ್ಟಿದ್ದೇನೆ. ಇನ್ನೊಮ್ಮೆ ನನ್ನ ಹಿಂದೆ ಫೋಟೋದಲ್ಲಿ ಕಾಣಿಸಿಕೊಂಡರೆ ನಿನ್ನ ಕೈ ಕಡಿಯುವುದಲ್ಲ ಕತ್ತು ಕಡಿಯುವುದಾಗಿ ಹೇಳಿದ್ದೆ. ಅವತ್ತು ಹಿಂದೂ ಹೆಣ್ಣುಮಕ್ಕಳ ವಿಚಾರದಲ್ಲಿ ಆತನ ಕೈ ಕಡಿಯುವ ಬದಲು ತಲೆ ಕಡಿದಿದ್ದರೆ ಇಂದು ಮುಮ್ತಾಜ್ ಅಲಿಯಂತಹವರು ಸಾಯುತ್ತಿರಲಿಲ್ಲ“ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮಿಸ್ಬಾ ಮಹಿಳಾ ಕಾಲೇಜ್ ಟ್ರಸ್ಟ್ ಕಾರ್ಯದರ್ಶಿ ಅಬ್ದುಲ್ ರಫೀಕ್ ಜೈನಿ ಕಾಮಿಲ್ ಸಖಾಫಿ ಅವರು ಮಾತಾಡಿ, “ಮುಮ್ತಾಜ್ಅಲಿ ಅವರು ಸತ್ತಿದ್ದಲ್ಲ, ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ. ಆರೋಪಿಗಳನ್ನು ಕಾನೂನಿನ ಕುಣಿಕೆಯಲ್ಲಿ ಬಿಗಿದು ಶಿಕ್ಷಸಬೇಕು. ನಾಗರಿಕ ಸಮಾಜಕ್ಕೆ ಕಳಂಕವಾಗಿರುವ ಹನಿ ಟ್ರ್ಯಾಪ್ ನಂತಹ ದುಷ್ಟ ಕೃತ್ಯವನ್ನು ಮಾಡಿರುವ ತಂಡವನ್ನು ಮಟ್ಟ ಹಾಕಬೇಕು. ತಮ್ಮ ಸಾಮಾಜಿಕ ಜೀವನದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆಯು ಇಲ್ಲದ ಮುಮ್ತಾಜ್ ಅಲಿ ಅವರು ತಮ್ಮ ಮೇಲೆ ಬಂದ ಆಪಾದನೆಯನ್ನು ಎದುರಿಸಲಾಗದೆ ಅವಮಾನದಿಂದ ತಮ್ಮ ಜೀವವನ್ನೇ ಬಲಿ ತೆಗೆದುಕೊಂಡಿದ್ದಾರೆ. ಪೊಲೀಸ್ ಇಲಾಖೆ ಈ ಬಗ್ಗೆ ಗಂಭೀರವಾಗಿ ಯೋಚಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಸಜ್ಜನರಾಗಿದ್ದ ಮುಂತಾಜ್ ಅಲಿಯವರು ಸಮಾಜಕ್ಕೆ ತಮ್ಮಿಂದಾದ ಸಹಾಯ ಮಾಡುತ್ತ ಸದಾ ಮುಂಚೂಣಿಯಲ್ಲಿ ಇರುತ್ತಿದ್ದವರು. ಈ ಘಟನೆಯಲ್ಲಿ ಇನ್ನಷ್ಟು ಕಾಣದ ಕೈಗಳು ಇರುವ ಸಾಧ್ಯತೆಯಿದೆ. ಪೊಲೀಸ್ ಅಧಿಕಾರಿಗಳು ಆರೋಪಿಗಳು ನೇಣಿಗೆ ಏರುವವರೆಗೆ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು“ ಎಂದರು. 

ಎಸ್ ಡಿಪಿಐ ಮುಖಂಡ ರಿಯಾಜ್ ಫರಂಗಿಪೇಟೆ ಮಾತಾಡಿ, ”ತನ್ನ ಜೊತೆ ಇದ್ದವರು ಊಟ ಹಾಕಿದವರನ್ನೇ ಇಂದು ಕೊಲ್ಲುತ್ತಾರೆ ಎಂದರೆ ನಮ್ಮ ಸಮಾಜದಲ್ಲಿ ಇನ್ನೂ ಅಂತವರು ಇದ್ದಾರೆ. ಅವರನ್ನು ನಮ್ಮ ಜಮಾತ್ ನಲ್ಲಿಟ್ಟು ಬೆಳೆಸುತ್ತಿರುವುದು ಅವರನ್ನು ಗುರುತಿಸುವಲ್ಲಿ ವಿಫಲರಾಗಿರುವುದು ನಮ್ಮ ದೊಡ್ಡ ತಪ್ಪು. ನಮ್ಮ ಮಸೀದಿ, ಸಾಮಾಜಿಕ ಸಂಘಟನೆಗಳಿಂದ ಅಂತವರನ್ನು ದೂರವಿಡಬೇಕು. ಮುಂದೆ ಇನ್ನಷ್ಟು ಮಂದಿ ಮೋಸದ ಜಾಲಕ್ಕೆ ಬಲಿಯಾಗಬಾರ್ದು. ಆ ಜವಾಬ್ದಾರಿಯನ್ನು ನಾವು ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಹೋರಾಟದ ಅಗತ್ಯವಿದೆ. 

ನಮಗೆ ಸರಕಾರದ ಮೇಲೆ ನಿರೀಕ್ಷೆಯಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಈ ಪ್ರಕರಣ ಹಳ್ಳ ಹಿಡಿಯದಂತೆ ನೋಡಿಕೊಳ್ಳಲು ನಾವೆಲ್ಲರೂ ಮುಂದೆ ಬೆಂಗಳೂರಿಗೆ ಹೋಗಿ ವಿಧಾನ ಸೌಧ ಎದುರು ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾದರೂ ಹಿಮ್ಮೆಟ್ಟಬಾರದು“ ಎಂದರು. 

”ಪೊಲೀಸ್ ಇಲಾಖೆ ಇಂತಹ ಪ್ರಕರಣ ಗಂಭೀರವಾಗಿ ಪರಿಗಣಿಸುವುದಿಲ್ಲ. ಆರೋಪಿಗಳಿಂದ ಸಿಗುವ ವಿಡಿಯೋ ಸಾಕ್ಷಿ ಗಳನ್ನೇ ಬಂಡವಾಳ ಮಾಡಿಕೊಂಡು ಅದರ ಮುಖಾಂತರ ಆರೋಪಿಗಳ ಬಳಿ ಕೋಟ್ಯಂತರ ರೂಪಾಯಿ ಹಣ ಪೀಕಿಸಿ ಜಿಲ್ಲೆ ತೊರೆದಿರುವ ಅದೆಷ್ಟೋ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕಂಡಿದ್ದೇವೆ. ಇದರಲ್ಲಿ 6 ಮಂದಿ ಆರೋಪಿಗಳಲ್ಲ 60 ಮಂದಿ ಇರಬಹುದು ಅವರನ್ನು ಕಂಬಿಯ ಹಿಂದೆ ತಳ್ಳುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು. ಆರೋಪಿಗಳನ್ನು ಜಮಾತ್ ನಿಂದ ಹೊರಗಡೆ ಹಾಕಲು ಮೀನಾಮೇಷ ಎಣಿಸಬೇಕಿಲ್ಲ ತಕ್ಷಣವೇ ಹೊರಗೆ ಹಾಕಬೇಕು“ ಎಂದು ಆಗ್ರಹಿಸಿದರು.ಬಳಿಕ ಎಸಿಪಿ ಶ್ರೀಕಾಂತ್ ಮೂಲಕ ಪೊಲೀಸ್ ಇಲಾಖೆಗೆ ಮನವಿಯನ್ನು ಅರ್ಪಿಸಲಾಯಿತು. 

ಮಿಸ್ಬಾ ಕಾಲೇಜು ಪ್ರಾಂಶುಪಾಲೆ ಝಯಿದ ಜಲೀಲ್, ಕಾರ್ಪೋರೇಟರ್ ಸಂಶಾದ್ ಅಬೂಬಕರ್, ಹ್ಯಾರಿಸ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ