ಮಂಗಳೂರು: ನಾಗರಿಕ ಸೇವಾ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದಿಂದ, ಮಂಗಳೂರು IAS, ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಹಾಗೂ ರಾಮಕೃಷ್ಣ ಮಿಷನ್, ಮಂಗಳೂರು ಇವುಗಳ ಸಹಯೋಗದಲ್ಲಿ "ಮಾರ್ಗದರ್ಶಿ – Cracking the UPSC Examination" ಎಂಬ ವಿಶೇಷ ಕಾರ್ಯಕ್ರಮವನ್ನು ಇದೇ ಜೂನ್ 28, 2026ರ ಭಾನುವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಿಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿರುವ ಆಯೋಜಕರು, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸ್ಪಷ್ಟ ದಿಕ್ಕುನಿರ್ದೇಶನ ನೀಡುವುದು ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಿಷನ್ ಮಂಗಳೂರಿನ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅರುಣ್ ಜೇಜಿ ಚಕ್ರವರ್ತಿ (IPS), ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ (IPS) ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಕಾಂತ್ ಸೋಮನಾಥ್ ವಿಭೂತೆ (IFS) ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ UPSC ಮಾಸ್ಟರ್ ಟ್ರೈನರ್‌ಗಳಾದ ಮೋಹನ್ ಕೃಷ್ಣಮೂರ್ತಿ ಹಾಗೂ ಚಂದ್ರಮೋಹನ್ ಇನಗಂಟಿ, ಡಾ. ಸುಮನಾ ಬಿ., ಶಿಕ್ಷಣ ತಜ್ಞ ಡಾನ್ ಪ್ರಕಾಶ್ ಮತ್ತು ಮಂಗಳೂರು IAS ಸಂಸ್ಥಾಪಕ ಸಂತೋಷ್ ರಾವ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ UPSC ಪರೀಕ್ಷಾ ಮಾದರಿ, ಪರಿಣಾಮಕಾರಿ ಅಧ್ಯಯನ ತಂತ್ರಗಳು, ಸಮಯ ನಿರ್ವಹಣೆ, ಉತ್ಪಾದಕತೆ ವೃದ್ಧಿ ಹಾಗೂ ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಜೊತೆಗೆ, ತಜ್ಞರೊಂದಿಗೆ ನೇರ ಪ್ರಶ್ನೋತ್ತರ ಅಧಿವೇಶನವೂ ನಡೆಯಲಿದೆ.
ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ರೊಯ್ ಕ್ಯಾಸ್ಟೆಲಿನೊ ಹಾಗೂ ಸಂತೋಷ್ ರಾವ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಎಲ್ಲಾ ಅಧಿವೇಶನಗಳ ಪ್ರವೇಶ, ಊಟ, ಇ-ಪ್ರಮಾಣಪತ್ರ ಹಾಗೂ ಭವಿಷ್ಯದ ವಿದ್ಯಾರ್ಥಿವೇತನ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳಿಗೆ ಅವಕಾಶ ಸಿಗಲಿದೆ. ಆಸಕ್ತರು 200 ರೂಪಾಯಿ ನೋಂದಣಿ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬಹುದಾಗಿದ್ದು, ಆಸನಗಳು ಸೀಮಿತವಾಗಿರುವುದರಿಂದ ಮೊದಲಿಗೆ ನೋಂದಾಯಿಸುವವರಿಗೆ ಆದ್ಯತೆ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.