ಮಂಗಳೂರು : ಕರಾವಳಿ ನಗರಿ ಮಂಗಳೂರಿನಲ್ಲಿ ಜೂನ್ 25ರಂದು ಹೈಪ್ರೊಫೈಲ್ ಸಾಂಸ್ಥಿಕ ಕಾರ್ಯಕ್ರಮವೊಂದು ಆಯೋಜನೆಗೊಂಡಿದ್ದು, ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕರಾವಳಿಯ ಮುಂಚೂಣಿ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಶನ್, ಅಡ್ಯಾರ್ ಗಾರ್ಡನ್ಸ್‌ನಲ್ಲಿ 'ಆನ್ ಈವಿನಿಂಗ್ ವಿತ್ ಶಾರುಖ್ ಖಾನ್' ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರೋಹನ್ ಕಾರ್ಪೊರೇಶನ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ರೋಹನ್ ಮೊಂತೇರೊ, ಜಾಗತಿಕ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಭಾರತದ ಜನಪ್ರಿಯ ನಟರನ್ನು ಮಂಗಳೂರಿಗೆ ಸ್ವಾಗತಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ. ಈ ಭೇಟಿಯು ಸಂಸ್ಥೆಯ ಬೆಳವಣಿಗೆಯ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ಮಾತನಾಡಿದ ಸಂಸ್ಥೆಯ ನಿರ್ದೇಶಕ ಶ್ರೀ ಡಿಯಾನ್ ಮೊಂತೇರೊ, ಇದು ಮಂಗಳೂರು ನಗರದಲ್ಲೇ ನಡೆಯಲಿರುವ ಅತಿ ದೊಡ್ಡ ಕಾರ್ಪೊರೇಟ್ ಸಮಾರಂಭಗಳಲ್ಲಿ ಒಂದಾಗಲಿದ್ದು, ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಕೋರಿದ್ದಾರೆ. ಜೂನ್ 25ರ ಸಂಜೆ 4 ಗಂಟೆಯಿಂದ ಕಾರ್ಯಕ್ರಮಕ್ಕೆ ಪ್ರವೇಶ ಆರಂಭವಾಗಲಿದ್ದು, ಉದ್ಯಮಿಗಳು, ಗಣ್ಯರು ಹಾಗೂ ವಿವಿಧ ವಲಯದ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಸುರಕ್ಷತೆ ಮತ್ತು ವ್ಯವಸ್ಥಿತ ನಿರ್ವಹಣೆಯ ದೃಷ್ಟಿಯಿಂದ ಈ ಕಾರ್ಯಕ್ರಮಕ್ಕೆ ಪೂರ್ವ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದ್ದು, ಅಧಿಕೃತ ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶವಿರುತ್ತದೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಮೂರು ದಶಕಗಳ ಇತಿಹಾಸ ಹೊಂದಿರುವ ರೋಹನ್ ಕಾರ್ಪೊರೇಶನ್‌ನ ಈ ವಿಶೇಷ ಆಮಂತ್ರಣದ ಸುದ್ದಿ ಪ್ರಕಟವಾಗುತ್ತಿದ್ದಂತೆ ಕರಾವಳಿ ಭಾಗದ ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಮತ್ತು ನಿರೀಕ್ಷೆಗಳು ಮನೆಮಾಡಿವೆ.