ಪುತ್ತೂರು : ಬೈಲಾಡಿ ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರ, ಪೂಮಾಣಿ, ಕಿಣ್ಣಿಮಾಣಿ, ರಾಜನ್ ದೈವಗಳ ಕಡಿಕೆ ಚಾವಡಿಯ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಕುರಿತು ಭಕ್ತಾಧಿಗಳ ಸಮಾಲೋಚನಾ ಸಭೆಯು ದೇವಸ್ಥಾನದಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿತು. ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ, ಕ್ಷೇತ್ರದ ಜೀರ್ಣೋದ್ಧಾರ ಕಾಮಗಾರಿಗಳು ಅತ್ಯಂತ ಭರದಿಂದ ಸಾಗುತ್ತಿದ್ದು, ಇನ್ನು ಒಂದು ತಿಂಗಳ ಅವಧಿಯಲ್ಲಿ ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಈಗಾಗಲೇ ಬ್ರಹ್ಮಕಲಶೋತ್ಸವಕ್ಕೆ ದಿನಾಂಕವನ್ನು ನಿಗದಿಗೊಳಿಸಲಾಗಿದ್ದು, 2027ರ ಜನವರಿ 5ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿವೆ. ಜನವರಿ 10ರಂದು ದೇವರಿಗೆ ಬ್ರಹ್ಮಕಲಶೋತ್ಸವ ನಡೆಯಲಿದೆ. ಈ ಮಹೋತ್ಸವದ ಅವಧಿಯಲ್ಲಿ ಪ್ರತಿದಿನ ಸಭಾ ಕಾರ್ಯಕ್ರಮಗಳು ನಡೆಯುವುದಿಲ್ಲ; ಬದಲಿಗೆ ಜನವರಿ 10ರ ಮಧ್ಯಾಹ್ನ ಮಾತ್ರ ವಿಶೇಷ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಉಳಿದಂತೆ ಪ್ರತಿದಿನ ಬೆಳಗ್ಗಿನಿಂದ ರಾತ್ರಿಯವರೆಗೆ ನಿರಂತರ ಭಜನಾ ಸೇವೆ ನಡೆಯಲಿದ್ದು, ಆಸಕ್ತ ಭಕ್ತರಿಗೆ ಭಜನೆ ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ಸಂಜೆ 6ರಿಂದ 10 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಇದಕ್ಕೆ ಪ್ರಾಯೋಜಕತ್ವ ನೀಡುವ ದಾನಿಗಳಿಗೆ ಅವಕಾಶ ನೀಡಲಾಗಿದೆ. ಪ್ರಾಯೋಜಕರ ಹೆಸರುಗಳನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಮುಂದುವರಿದು ಮಾತನಾಡಿದ ಅವರು, ಜನವರಿ 11ರಂದು ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ಹಾಗೂ ಮಂತ್ರಾಕ್ಷತೆಯೊಂದಿಗೆ ಬ್ರಹ್ಮಕಲಶ ಮತ್ತು ಜಾತ್ರೋತ್ಸವ ಸಂಪನ್ನಗೊಳ್ಳಲಿದೆ. ತದನಂತರ ಕಡಿಕೆ ಚಾವಡಿಯಲ್ಲಿ ದೈವಗಳ ನೇಮೋತ್ಸವವು ಫೆಬ್ರವರಿ 4ರಿಂದ 6ರವರೆಗೆ ಸಾಂಪ್ರದಾಯಿಕವಾಗಿ ನಡೆಯಲಿದೆ. ಫೆಬ್ರವರಿ 3ರಂದು ಸಂಜೆ ದೇವರಿಗೆ ರಂಗಪೂಜೆ ನಡೆದ ಬಳಿಕ ದೈವಗಳ ಭಂಡಾರವು ಕಡಿಕೆ ಚಾವಡಿಗೆ ಆಗಮಿಸಲಿದೆ. ವಿಶೇಷವಾಗಿ, 2028ರಿಂದ ಮುಂಬರುವ ವರ್ಷಗಳಲ್ಲಿ ಹಳೆಯ ಸಂಪ್ರದಾಯದಂತೆಯೇ ಫೆಬ್ರವರಿ 1ರಿಂದ 6ರ ತನಕ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದು ಶಶಿಕುಮಾರ್ ರೈ ಸ್ಪಷ್ಟಪಡಿಸಿದರು.
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ 5 ಲಕ್ಷ ರೂಪಾಯಿಗೂ ಅಧಿಕ ದೇಣಿಗೆ ನೀಡಿದ ಭಕ್ತಾಧಿಗಳು, ಮರ ಹಾಗೂ ರಸ್ತೆ ಮತ್ತು ದೇವಸ್ಥಾನಕ್ಕೆ ಜಾಗವನ್ನು ಕೊಡುಗೆಯಾಗಿ ನೀಡಿದ ದಾನಿಗಳ ಹೆಸರುಗಳನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಗ್ರಾನೈಟ್ ಶಿಲೆಯಲ್ಲಿ ಮುದ್ರಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ, ದೇವರ ಬ್ರಹ್ಮಕಲಶೋತ್ಸವದ ಸಮಯದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೂ ಕಡಿಕೆ ಚಾವಡಿಯ ಎಲ್ಲಾ ಜಾಗಗಳನ್ನು ದೇವರ ಹೆಸರಿನಲ್ಲಿಯೇ ಅಧಿಕೃತವಾಗಿ ದಾಖಲೀಕರಣಗೊಳಿಸುವ ಮಹತ್ವದ ಪ್ರಸ್ತಾಪಕ್ಕೆ ಸಭೆಯು ಒಮ್ಮತದಿಂದ ಅನುಮತಿ ನೀಡಿತು.
ಇದೇ ಸಂದರ್ಭದಲ್ಲಿ ಬೆಂದ್ರ್ ತೀರ್ಥ ಸವಾರಿ ಹಾಗೂ ಕಟ್ಟೆಪೂಜೆ ಸ್ಥಗಿತದ ಕುರಿತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ದೇವರ ವಾರ್ಷಿಕಾವಧಿ ಜಾತ್ರೆ ಹಾಗೂ ಉತ್ಸವದ ಸಮಯದಲ್ಲಿ ಬೆಂದ್ರ್ ತೀರ್ಥ ಸವಾರಿ ಮತ್ತು ಕಟ್ಟೆಪೂಜೆ ನಡೆಸುವ ಪದ್ಧತಿ ಇದ್ದರೂ, ಇದು ಪೂರ್ವಾರ್ಜಿತ ಸಂಪ್ರದಾಯವಾಗಿರಲಿಲ್ಲ. ಕಳೆದ ಬ್ರಹ್ಮಕಲಶೋತ್ಸವದ ಬಳಿಕವಷ್ಟೇ ಇದನ್ನು ಅಳವಡಿಸಿಕೊಳ್ಳಲಾಗಿತ್ತು. ದೇವರ ಸವಾರಿ ಮತ್ತು ಕಟ್ಟೆಪೂಜೆಯಲ್ಲಿ ಬೆರಳೆಣಿಕೆಯ ಭಕ್ತರು ಮಾತ್ರ ಪಾಲ್ಗೊಳ್ಳುತ್ತಿರುವುದರಿಂದ, ಈ ಕುರಿತು ಕ್ಷೇತ್ರದ ತಂತ್ರಿಗಳಲ್ಲಿ ವಿಚಾರಿಸಿದಾಗ, "ದೇವರ ಉತ್ಸವದಲ್ಲಿ ಭಕ್ತರೇ ಇಲ್ಲದಿದ್ದಲ್ಲಿ ಅದರ ಮೇಲಿನ ಗಾಂಭೀರ್ಯತೆ ಕಡಿಮೆಯಾಗುತ್ತದೆ, ಆದ್ದರಿಂದ ಇದನ್ನು ಉತ್ಸವದ ಸಮಯದಲ್ಲಿ ನಡೆಸುವುದು ಬೇಡ" ಎಂದು ಸೂಕ್ತ ಸಲಹೆ ನೀಡಿದ್ದಾರೆ. ದೇವಸ್ಥಾನದ ಬ್ರಹ್ಮವಾಹಕರು ಕೂಡ ದೇವರ ಸವಾರಿ ಅತ್ಯಂತ ಕಷ್ಟದ ಕೆಲಸ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಟ್ಟೆ ಮಾಲೀಕರನ್ನು ಈಗಾಗಲೇ ಸಂಪರ್ಕಿಸಿ ಅವರ ಒಪ್ಪಿಗೆಯನ್ನೂ ಪಡೆಯಲಾಗಿದ್ದು, ದೇವರ ಸವಾರಿ ಹಾಗೂ ಕಟ್ಟೆಪೂಜೆಯನ್ನು ಸ್ಥಗಿತಗೊಳಿಸಲು ಸಭೆಯು ಅನುಮೋದನೆ ನೀಡಿದೆ.
ಇದಕ್ಕೆ ಪರ್ಯಾಯವಾಗಿ, ಮುಂಬರುವ ನವೆಂಬರ್ 2ರಂದು ದೇವಸ್ಥಾನದ ತಂತ್ರಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ತದನಂತರ ಎಲ್ಲಾ 16 ಕಟ್ಟೆಯ ಮಾಲೀಕರಿಗೆ ಪ್ರಸಾದ ನೀಡಿ, ಕಟ್ಟೆಗಳ ತೆರವು ಕಾರ್ಯಾಚರಣೆಗೆ ಅನುಮತಿ ನೀಡಲಾಗುವುದು. ದೇವಸ್ಥಾನದ ಆವರಣದಲ್ಲಿರುವ ವಸಂತಕಟ್ಟೆಯನ್ನು ಹೊರತುಪಡಿಸಿ, ಉಳಿದ ಮೂರು ಕಟ್ಟೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗುವುದು. ಭಕ್ತಾದಿಗಳು ವಸಂತಕಟ್ಟೆಯಲ್ಲಿ ಮಾತ್ರ ದೇವರಿಗೆ ಕಟ್ಟೆಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಶಶಿಕುಮಾರ್ ರೈ ಬಲ್ಯೊಟ್ಟು ತಿಳಿಸಿದರು.
ಈ ಪ್ರಮುಖ ಸಮಾಲೋಚನಾ ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ವಿಠಲ ರೈ ಬಲ್ಯೊಟ್ಟುಗುತ್ತು, ಅರ್ಚಕರಾದ ಅನಂತರಾಮ ಐತಾಳ್ ಮಾಡುಳ್ಳಾಯ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶುಭಕರ ರೈ ಬಲ್ಯೊಟ್ಟುಗುತ್ತು ಹಾಗೂ ಸಂಚಾಲಕರಾದ ರಾಧಾಕೃಷ್ಣ ರೈ ಬಲ್ಯೊಟ್ಟುಗುತ್ತು ಉಪಸ್ಥಿತರಿದ್ದರು. ಅಲ್ಲದೆ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಊರಿನ ಅಪಾರ ಸಂಖ್ಯೆಯ ಭಕ್ತಾಧಿಗಳು ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.