ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನ ತಕ್ಷಶಿಲಾ ಹಾಗೂ ಶಾರದ ವಸತಿನಿಲಯಗಳಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಯೋಗ ಶಿಬಿರವೊಂದು ಇತ್ತೀಚೆಗೆ ಪ್ರಾರಂಭಗೊಂಡಿದೆ. "ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ" ಎಂಬ ಉನ್ನತ ಧೈಯದೊಂದಿಗೆ ಕಾರ್ಯಾಚರಿಸುತ್ತಿರುವ ವಿವೇಕಾನಂದ ಪದವಿಪೂರ್ವ ಕಾಲೇಜು ಹಾಗೂ "ಸಂಸ್ಕಾರ-ಸಂಘಟನೆ-ಸೇವೆ" ಎಂಬ ಧೈಯೋದ್ದೇಶದೊಂದಿಗೆ ಯೋಗ ಶಿಕ್ಷಣವನ್ನು ನೀಡುತ್ತಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ, ಪುತ್ತೂರು ತಾಲೂಕು ಸಮಿತಿಯ ಜಂಟಿ ಸಹಯೋಗದೊಂದಿಗೆ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ತಕ್ಷಶಿಲಾ ಬಾಲಕರ ವಸತಿನಿಲಯ ಹಾಗೂ ಶಾರದ ಬಾಲಕಿಯರ ವಸತಿನಿಲಯಗಳಲ್ಲಿ ನಡೆಯುತ್ತಿರುವ ಈ ಶಿಬಿರದ ನೇತೃತ್ವವನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಶಿಕ್ಷಕರು ಹಾಗೂ ಜಿಲ್ಲಾ ಸಂಘಟನ ಪ್ರಮುಖರಾದ ಜಯಪ್ರಸಾದ್ ಮತ್ತು ಹರಿಪ್ರಸಾದ್ ಅವರು ವಹಿಸಿಕೊಂಡಿದ್ದಾರೆ. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸುವ ಹಾಗೂ ಅವರಲ್ಲಿ ಮಾನಸಿಕ ಏಕಾಗ್ರತೆಯನ್ನು ಮತ್ತು ಶಿಸ್ತನ್ನು ಹೆಚ್ಚಿಸುವ ಮುಖ್ಯ ಉದ್ದೇಶದೊಂದಿಗೆ ಈ ಯೋಗ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ.