ಕಾರ್ಕಳ : ಇತ್ತೀಚಿನ ದಿನಗಳಲ್ಲಿ ಶಿಕ್ಷಣವು ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ವಿದ್ಯಾವರ್ಧಕ ಸಂಸ್ಥೆಯ ಪ್ರಯತ್ನ ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳು ತಂತ್ರಜ್ಞಾನದ ಕಡೆಗೆ ಸಾಗುವ ಮೂಲಕ ಶೈಕ್ಷಣಿಕವಾಗಿಯೂ ಸಾಧನೆ ಮಾಡಬೇಕು ಎಂದು ಶಾಸಕ ವಿ.ಸುನೀಲ್ ಕುಮಾರ್ ಕರೆ ನೀಡಿದ್ದಾರೆ. ಮುಂಡ್ಕೂರು ವಿದ್ಯಾವರ್ಧಕ ಪ.ಪೂ.ಕಾಲೇಜಿನಲ್ಲಿ ಆಡಳಿತ ಮಂಡಳಿ, ಮುಂಬೈನ ವಿದ್ಯಾದುರ್ಗ ಟ್ರಸ್ಟ್ ಹಾಗೂ ಮುಂಡ್ಕೂರಿನ ವೇದಾವತಿ ರಾಘವೇಂದ್ರ ಪ್ರಭು ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ ಮತ್ತು ಸಾಧಕರ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು, ಕಾಲೇಜಿನ ರಸ್ತೆ ಅಭಿವೃದ್ಧಿಗಾಗಿ 5 ಲಕ್ಷ ರೂ. ಅನುದಾನ ಘೋಷಿಸಿದರು. ಜೊತೆಗೆ ವಸತಿ ನಿಲಯ ಪ್ರಾರಂಭಿಸಲು ಇಲಾಖೆಯ ಮೂಲಕ ಸೂಕ್ತವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮುಂಡ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದು ವರ್ಗಾವಣೆಗೊಂಡ ರಂಗಸ್ವಾಮಿ ಮತ್ತು ಅವರ ಪತ್ನಿ ಅಂಬಿಕಾ ದಂಪತಿಯನ್ನು ಸನ್ಮಾನಿಸಲಾಯಿತು ಹಾಗೂ ವಿವಿಧ ಸಾಧಕರನ್ನು ಗೌರವಿಸಲಾಯಿತು. ಮುಂಡ್ಕೂರಿನ ವೇದಾವತಿ ರಾಘವೇಂದ್ರ ಪ್ರಭು ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪಠ್ಯ ಪೂರಕ ಸಾಮಗ್ರಿಗಳನ್ನು ವಿತರಿಸಲಾಯಿತು. ಇದೇ ವೇಳೆ ಸಂಸ್ಥೆಯ ನೂತನ ವೆಬ್‌ಸೈಟ್ ಅನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ರಾಮದಾಸ ಆಚಾರ್ಯ, ಮುಲ್ಲಡ್ಕ ಗುರುಪ್ರಸಾದ್ ಸುಧಾಕರ ಶೆಟ್ಟಿ, ಡಾ.ಪಿ.ಬಾಲಕೃಷ್ಣ ಆಳ್ವ, ಪಾಂಡುರಂಗ ಪ್ರಭು, ಎಂ.ಜಿ.ಕರ್ಕೇರ, ಕೋರಿಬೆಟ್ಟು ಗುತ್ತು ಸುರೇಂದ್ರ ಎಸ್.ಶೆಟ್ಟಿ, ಸಚ್ಚೇರಿಪೇಟೆ ನಡಿಗುತ್ತು ಜಗದೀಶ್ ಶೆಟ್ಟಿ, ಡಾ.ರಾಜಾರಾಮ ರೈ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.