image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ಮಾಸ್ಟರ್ ಪ್ಲಾನ್‌ನಲ್ಲಿ ಪಾದಚಾರಿ ಸ್ನೇಹಿ ಯೋಜನೆಗೆ ಸಂಸದ ಕ್ಯಾ. ಚೌಟ ಒತ್ತಾಯ

ಮಂಗಳೂರು ಮಾಸ್ಟರ್ ಪ್ಲಾನ್‌ನಲ್ಲಿ ಪಾದಚಾರಿ ಸ್ನೇಹಿ ಯೋಜನೆಗೆ ಸಂಸದ ಕ್ಯಾ. ಚೌಟ ಒತ್ತಾಯ

ಮಂಗಳೂರು : ನಗರದ ಮುಂಬರುವ ಮಾಸ್ಟರ್‌ ಪ್ಲಾನ್‌ನಲ್ಲಿ ಪಾದಚಾರಿಗಳ ಸುರಕ್ಷತೆ ಮತ್ತು ಸುಗಮ ಓಡಾಟಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಕೋರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ದೇಶದಲ್ಲಿ ಪಾದಚಾರಿಗಳ ಹಕ್ಕುಗಳ ಕುರಿತು ಸುಪ್ರೀಂಕೋರ್ಟ್‌ ನೀಡಿದ ಮಹತ್ವದ ತೀರ್ಪನ್ನು ಉಲ್ಲೇಖಿಸಿ ಈ ಪತ್ರ ಬರೆಯಲಾಗಿದ್ದು, ಇದರ ಪ್ರತಿಯನ್ನು ನಗರಾಭಿವೃದ್ಧಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಮೂಡಾ (MUDA) ಆಯುಕ್ತರಿಗೂ ರವಾನಿಸಲಾಗಿದೆ.

ಸುರಕ್ಷಿತ ಪಾದಚಾರಿ ಮಾರ್ಗದಲ್ಲಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ, ಭವಿಷ್ಯದ ಮಂಗಳೂರಿನ ಅಭಿವೃದ್ಧಿಗೆ ದಿಕ್ಸೂಚಿಯಾಗಿರುವ ಮಾಸ್ಟರ್ ಪ್ಲಾನ್‌ನಲ್ಲಿ ಪಾದಚಾರಿ ಮೂಲಸೌಕರ್ಯಕ್ಕೆ ಒತ್ತು ನೀಡಬೇಕು ಎಂದು ಸಂಸದರು ಪ್ರತಿಪಾದಿಸಿದ್ದಾರೆ. ನಗರದಲ್ಲಿ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಕಾರ್ಮಿಕರು ನಡಿಗೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದು, ವಾಹನ ದಟ್ಟಣೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಸುರಕ್ಷಿತ ಫುಟ್‌ಪಾತ್‌ಗಳ ನಿರ್ಮಾಣ ಅತ್ಯಗತ್ಯವಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ನಗರಕ್ಕೆ ಸಮಗ್ರ ಪಾದಚಾರಿ ಸಂಚಾರ ವ್ಯವಸ್ಥೆ ರೂಪಿಸುವಂತೆ ಒತ್ತಾಯಿಸಿರುವ ಕ್ಯಾ. ಚೌಟ ಅವರು, ಅಡೆತಡೆ ರಹಿತ ಫುಟ್‌ಪಾತ್‌ಗಳು, ಪ್ರಮುಖ ಸಾರ್ವಜನಿಕ ಸ್ಥಳಗಳ ಬಳಿ ಸುರಕ್ಷಿತ ರಸ್ತೆ ದಾಟುವ ವ್ಯವಸ್ಥೆ, ವಿಶೇಷಚೇತನ ಸ್ನೇಹಿ ಮೂಲಸೌಕರ್ಯ ಹಾಗೂ ಫುಟ್‌ಪಾತ್‌ಗಳ ಮೇಲಿನ ಅತಿಕ್ರಮಣ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ. ಮಾಸ್ಟರ್ ಪ್ಲಾನ್ ಅಂತಿಮಗೊಳಿಸುವ ಮುನ್ನ ಮಂಗಳೂರು ನಗರದ ಸಮಗ್ರ ‘ಪಾದಚಾರಿ ಮೂಲಸೌಕರ್ಯ ಮತ್ತು ವಾಕಬಿಲಿಟಿ ಆಡಿಟ್’ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿರುವ ಅವರು, ನಗರದ ರಸ್ತೆ ಸುರಕ್ಷತೆ ಮತ್ತು ನಿವಾಸಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಈ ಯೋಜನೆ ಪ್ರಮುಖ ಕೊಡುಗೆ ನೀಡಲಿದೆ ಎಂದು ಆಶಿಸಿದ್ದಾರೆ.

Category
ಕರಾವಳಿ ತರಂಗಿಣಿ