image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಲ್ಲಿ 12ನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಧರ್ಮಸ್ಥಳದಲ್ಲಿ 12ನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಧರ್ಮಸ್ಥಳ : ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವ್ಯಾಪ್ತಿಯ ೪೦೦ ಕಾಲೇಜುಗಳ ೪೫ ಸಾವಿರ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂದು ವಿ.ವಿ. ಉಪಕುಲಪತಿ ಡಾ. ಭಗವಾನ್ ಬಿ.ಸಿ. ತಿಳಿಸಿದರು. ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಭಾನುವಾರ ನಡೆದ ೧೨ನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಆನ್‌ಲೈನ್ ಮೂಲಕ ಅವರು ಸಂದೇಶ ನೀಡಿದರು. ಉಜಿರೆಯ ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಕಾಲೇಜಿನಲ್ಲಿ ಅನಸ್ತೇಶಿಯಾ ಮತ್ತು ಅಕ್ಯುಪಂಕ್ಚರ್‌ನಲ್ಲಿ ಸ್ನಾತಕೋತ್ತರ ಪದವಿ ತರಗತಿಗಳ ಅನುಮೋದನೆಗೆ ಕೋರಲಾಗಿದ್ದು, ಸದ್ಯದಲ್ಲೇ ಅನುಮತಿ ನೀಡಲಾಗುವುದು ಎಂದು ಇದೇ ವೇಳೆ ರಾಜೀವ್‌ಗಾಂಧಿ ಆರೋಗ್ಯ ವಿ.ವಿ.ಯ ಪಠ್ಯಕ್ರಮ ಅಭಿವೃದ್ಧಿ ಕೇಂದ್ರದ ಪ್ರಭಾರ ನಿರ್ದೇಶಕ ಡಾ. ಷಣ್ಮುಖಪ್ಪ ಭರವಸೆ ನೀಡಿದರು. ಅಲ್ಲದೆ, ಕಾಲೇಜು ಆಶ್ರಯದಲ್ಲಿ ವರ್ಷಕ್ಕೊಂದು ಗ್ರಾಮವನ್ನು ದತ್ತು ಪಡೆದು ಗ್ರಾಮೀಣ ಪ್ರದೇಶದ ಜನರಿಗೆ ಯೋಗ ತರಬೇತಿ ನೀಡಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಾಶಂಸನೆ ಮಾಡಿದ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ನಮ್ಮ ಸನಾತನ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆ "ಯೋಗ" ಆಗಿದ್ದು, ಜಾಗತಿಕ ಮಟ್ಟದಲ್ಲಿ ಇದಕ್ಕೆ ಹೆಚ್ಚಿನ ಪ್ರಚಾರ ಅಗತ್ಯವಿದೆ ಎಂದರು. ಆಧುನಿಕ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಉಂಟಾಗುವ ಒತ್ತಡಗಳನ್ನು ನಿಯಂತ್ರಿಸಿ ಸುಖ-ಶಾಂತಿ ಹಾಗೂ ನೆಮ್ಮದಿಯ ಜೀವನ ನಡೆಸಲು ಯೋಗ ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಕುಮಾರಿ ಚಿನ್ಮಯಿ ಅವರಿಗೆ "ಯೋಗರತ್ನ" ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ಸಾಮೂಹಿಕ ಯೋಗ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಶಾಂತಿವನ ಪ್ರಕೃತಿಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ ಶೆಟ್ಟಿ ವರದಿ ಮಂಡಿಸಿದರು. ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಸ್ವಾಗತಿಸಿ, ಉಪಪ್ರಾಂಶುಪಾಲೆ ಡಾ. ಸುಜಾತ ಕೆ.ಜೆ. ವಂದಿಸಿದರು. ಡಾ. ಅನನ್ಯ ಕಾರ್ಯಕ್ರಮ ನಿರ್ವಹಿಸಿದರು.

Category
ಕರಾವಳಿ ತರಂಗಿಣಿ