image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಲ್ಲಿ ಭಕ್ತ ಸಾಗರ: ವಸತಿಗೃಹಗಳು ಭರ್ತಿ, ರಸ್ತೆಗಳಲ್ಲಿ ಭಾರಿ ವಾಹನ ದಟ್ಟಣೆ

ಧರ್ಮಸ್ಥಳದಲ್ಲಿ ಭಕ್ತ ಸಾಗರ: ವಸತಿಗೃಹಗಳು ಭರ್ತಿ, ರಸ್ತೆಗಳಲ್ಲಿ ಭಾರಿ ವಾಹನ ದಟ್ಟಣೆ

ಧರ್ಮಸ್ಥಳ : ವೀಕೆಂಡ್ ರಜಾದಿನದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಧರ್ಮಸ್ಥಳಕ್ಕೆ ಭಾನುವಾರ ದಾಖಲೆ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಹರಿದುಬಂದ ಭಕ್ತರ ದಂಡಿನಿಂದಾಗಿ ಇಡೀ ಕ್ಷೇತ್ರವು ಜೈಕಾರದ ಘೋಷಣೆಗಳೊಂದಿಗೆ ಜನಸಾಗರವಾಗಿ ಮಾರ್ಪಟ್ಟಿತ್ತು.

ಭಕ್ತರ ಸಂಖ್ಯೆ ಅತಿಯಾದ ಕಾರಣ ಧರ್ಮಸ್ಥಳ ಮಾತ್ರವಲ್ಲದೆ ಅದರ ಸುತ್ತಮುತ್ತಲಿನ ಉಪನಗರಗಳಾದ ಕನ್ಯಾಡಿ ಮತ್ತು ಉಜಿರೆಯಲ್ಲಿರುವ ಎಲ್ಲಾ ಖಾಸಗಿ ಹಾಗೂ ದೇವಸ್ಥಾನದ ವಸತಿಗೃಹಗಳು ಮತ್ತು ಲಾಡ್ಜ್‌ಗಳು ಸಂಪೂರ್ಣವಾಗಿ ಭರ್ತಿಯಾಗಿದ್ದವು. ಶನಿವಾರ ರಾತ್ರಿಯೇ ಕ್ಷೇತ್ರಕ್ಕೆ ಬಂದು ತಂಗಿದ್ದ ಭಕ್ತರಿಗೆ ವಸತಿ ಸಿಗದೆ ಕೆಲವರು ಪರದಾಡುವಂತಾಯಿತು. ಇನ್ನು ಭಾನುವಾರ ಮುಂಜಾನೆಯಿಂದಲೇ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರದ ದಟ್ಟಣೆ ಗಣನೀಯವಾಗಿ ಹೆಚ್ಚಾಗಿದ್ದು, ಕಿಲೋಮೀಟರ್‌ಗಟ್ಟಲೆ ದೂರು ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂದಿತು. ಸುಗಮ ಸಂಚಾರಕ್ಕಾಗಿ ಪೊಲೀಸರು ಮತ್ತು ದೇವಸ್ಥಾನದ ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

ಕ್ಷೇತ್ರದ ಪ್ರಮುಖ ಸೇವಾ ಸ್ಥಳಗಳಾದ ಹರಿಕೆಮಂಡೆ ಅಥವಾ ಮುಡಿ ಕೊಡುವ ಸ್ಥಳದಲ್ಲಿ ತಲೆಕೂದಲು ಸಮರ್ಪಿಸಲು ಭಕ್ತರು ಗಂಟೆಗಟ್ಟಲೆ ಸರದಿಯಲ್ಲಿ ಕಾಯುತ್ತಿದ್ದರು. ವಸತಿಗೃಹಗಳ ಕೌಂಟರ್‌ಗಳು, ದೇವಸ್ಥಾನದ ಪ್ರಸಾದ ಹಾಗೂ ದರ್ಶನದ ಸಾಲುಗಳು ಮತ್ತು ಪಟ್ಟಣದ ಹೋಟೆಲ್‌ಗಳ ಮುಂದೆಯೂ ಭಕ್ತಾದಿಗಳ ಉದ್ದನೆಯ ಸರದಿ ಸಾಲುಗಳು ರಾರಾಜಿಸುತ್ತಿದ್ದವು. ತೀವ್ರ ಜನದಟ್ಟಣೆಯ ನಡುವೆಯೂ ಭಕ್ತರು ಶಿಸ್ತುಬದ್ಧವಾಗಿ ಸಾಲಿನಲ್ಲಿ ನಿಂತು, ಮಂಜುನಾಥ ಸ್ವಾಮಿಯ ದರ್ಶನ ಪಡೆದು ಧನ್ಯತೆಯ ಭಾವದೊಂದಿಗೆ ಪುನೀತರಾದರು. ಕ್ಷೇತ್ರದ ಅನ್ನಪೂರ್ಣ ಛತ್ರದಲ್ಲೂ ಸಹಸ್ರಾರು ಭಕ್ತರಿಗೆ ನಿರಂತರವಾಗಿ ಅನ್ನಪ್ರಸಾದ ಸೇವೆ ಒದಗಿಸಲಾಯಿತು.

Category
ಕರಾವಳಿ ತರಂಗಿಣಿ