image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾರಿಂಜದಲ್ಲಿ ಯಶಸ್ವಿ ‘ಯೋಗ ವಿದ್ ಯೋಧ’ ಕಾರ್ಯಕ್ರಮ

ಕಾರಿಂಜದಲ್ಲಿ ಯಶಸ್ವಿ ‘ಯೋಗ ವಿದ್ ಯೋಧ’ ಕಾರ್ಯಕ್ರಮ

ಬಂಟ್ವಾಳ : ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಐತಿಹಾಸಿಕ ಶ್ರೀ ಕ್ಷೇತ್ರ ಕಾರಿಂಜೇಶ್ವರ ಬೆಟ್ಟದ ಆವರಣದಲ್ಲಿ 3ನೇ ಆವೃತ್ತಿಯ ’ಯೋಗ ವಿದ್ ಯೋಧ’ ಬೃಹತ್ ಯೋಗಾಭ್ಯಾಸ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ನಡೆದ ಈ ಅಪೂರ್ವ ಯೋಗಾಭ್ಯಾಸಕ್ಕೆ ಪ್ರಕೃತಿ ರುದ್ರ ರಮಣೀಯ ಕೊಡ್ಯಾಮಲೆ ಬೆಟ್ಟಗಳ ಶ್ರೇಣಿ ಸಾಕ್ಷಿಯಾಯಿತು. ಈ ಬಾರಿಯ ವಿಶ್ವ ಯೋಗ ದಿನದ ಧ್ಯೇಯವಾಕ್ಯವಾದ "ಆರೋಗ್ಯಕರ ವಯಸ್ಸಿಗೆ ಯೋಗ" ಪರಿಕಲ್ಪನೆಗೆ ಪೂರಕವಾಗಿ, ಪ್ರಖ್ಯಾತ ಯೋಗಪಟು ಗೋಪಾಲಕೃಷ್ಣ ದೇಲಂಪಾಡಿ ಅವರ ಮಾರ್ಗದರ್ಶನದಲ್ಲಿ ವಿವಿಧ ಯೋಗಾಸನ ಹಾಗೂ ಪ್ರಾಣಾಯಾಮಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು, ಯುವಕರು, ನಟ-ನಟಿಯರು ಹಾಗೂ ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಮಹತ್ವವನ್ನು ಸಾರಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಸ್ಕಾಲರ್‌ಶಿಪ್ ವಿತರಿಸಿ ಗೌರವಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಈ 'ಯೋಗ ವಿದ್ ಯೋಧ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮೊದಲ ವರ್ಷ ಸಸಿಹಿತ್ಲುವಿನ ಕಡಲ ಕಿನಾರೆಯಲ್ಲಿ ಹಾಗೂ ಕಳೆದ ಬಾರಿ ಐತಿಹಾಸಿಕ ಸೋಮೇಶ್ವರ ದೇಗುಲದ ಅಂಗಣದಲ್ಲಿ ನಡೆದಿತ್ತು ಎಂದು ಆಯೋಜಕರು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ