ಮಂಗಳೂರು: 2014 ರಿಂದ ಆರಂಭಗೊಂಡ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನಮ್ಮ ಪ್ರಾಚೀನ ಜೀವನ ಶೈಲಿಗೆ ಜಾಗತಿಕ ಮಟ್ಟದಲ್ಲಿ ಸಿಕ್ಕ ಅತ್ಯುನ್ನತ ಗೌರವವಾಗಿದೆ ಎಂದು ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪುರಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯಯುತ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಬಗೆಯನ್ನು ಭಾರತವು ಇಡೀ ಜಗತ್ತಿಗೆ ಪರಿಚಯಿಸಿದೆ. ಇಂದಿನ ಜಾಗತಿಕ ಒತ್ತಡದ ಬದುಕಿನಲ್ಲಿ ಯೋಗದ ಮಹತ್ವ ಬಹಳಷ್ಟಿದೆ ಮತ್ತು ಪ್ರತಿಯೊಬ್ಬರೂ ಇದನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವೇದವ್ಯಾಸ ಕಾಮತ್ ವಹಿಸಿದ್ದರು. ಈ ಸಂದರ್ಭದಲ್ಲಿ ಯೋಗ ಕ್ಷೇತ್ರದಲ್ಲಿ ಸಾಧನೆಗೈದು ವಿಶ್ವದಾಖಲೆ ನಿರ್ಮಿಸಿದ ಕಡಬ ತಾಲೂಕಿನ ಏನಕಲ್ಲು ನಿವಾಸಿ, ಆರನೇ ತರಗತಿಯ ವಿದ್ಯಾರ್ಥಿ ಅಕ್ಷಯ್ ಬಿ. ಎಂ. ಅವರನ್ನು ವೇದಿಕೆಯಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದರ್ಶನ್ ಹೆಚ್. ವಿ., ಜಿಲ್ಲಾ ಸರ್ಜನ್ ಡಾ. ಶಿವಪ್ರಕಾಶ್, ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಡಿಸಿಪಿ ರವಿಶಂಕರ್, ಎಎಸ್ಪಿ ಅನಿಲ್ ಕುಮಾರ್ ಹಾಗೂ ಬ್ರಹ್ಮಕುಮಾರಿ ಅಂಬಿಕಾ ಅವರು ಉಪಸ್ಥಿತರಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಣಿಕರ್ಣಿಕಾ ಸ್ವಾಗತಿಸಿದರು. ಉದ್ಘಾಟನಾ ಸಮಾರಂಭದ ನಂತರ ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಅವರ ನೇತೃತ್ವದಲ್ಲಿ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮವು ಜರುಗಿತು.