ಮಂಗಳೂರು: ನಗರದ ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ (DKBA) ವತಿಯಿಂದ ಆಯೋಜಿಸಲಾದ 'ಪ್ರಿಮಿಯರ್ ಲೀಗ್' ಕ್ರೀಡಾಕೂಟವನ್ನು ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಆಯುಷ್ ಶೆಟ್ಟಿ ಅವರು ವಿದ್ಯುಕ್ತವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಸೋಸಿಯೇಷನ್ ವತಿಯಿಂದ ಆಯುಷ್ ಶೆಟ್ಟಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು ಮತ್ತು ಗೌರವಾರ್ಥವಾಗಿ 2 ಲಕ್ಷ ರೂಪಾಯಿಗಳ ಚೆಕ್ ಅನ್ನು ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಆಯುಷ್ ಶೆಟ್ಟಿ, ಕ್ರೀಡಾ ಕ್ಷೇತ್ರದ ಅನುಭವಗಳನ್ನು ಹಂಚಿಕೊಂಡರು. ನಂತರ ಜಿಲ್ಲೆಯ ಉದಯೋನ್ಮುಖ ಕ್ರೀಡಾಪಟುಗಳು ಮತ್ತು ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ತಮ್ಮ ಸಾಧನೆಯ ಹಾದಿ ಹಾಗೂ ಕ್ರೀಡೆಯಲ್ಲಿನ ಶಿಸ್ತಿನ ಕುರಿತು ಮಾರ್ಗದರ್ಶನ ನೀಡಿದರು.
ಈ ಸಮಾರಂಭದಲ್ಲಿ ಜಿಲ್ಲಾಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿ ರಾಜು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ, ಸ್ಮಾರ್ಟ್ ಸಿಟಿಯ ಜನರಲ್ ಮ್ಯಾನೇಜರ್ ಅರುಣ್ ಪ್ರಭ ಹಾಗೂ ಏಕೆ ಆಪಲ್ ಗ್ರೂಪಿನ ಮಾಲೀಕ ಏಕೆ ನಿಯಾಜ್ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಅಸೋಸಿಯೇಷನ್ನ ಉಪಾಧ್ಯಕ್ಷರಾದ ಅಶೋಕ್ ಹೆಗಡೆ ಮತ್ತು ಅಬಿದ್ ಅಲಿ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿದರೆ, ಕಾರ್ಯದರ್ಶಿ ಸುಪ್ರೀತಾ ಕಾರ್ಯಕ್ರಮವನ್ನು ಧನ್ಯವಾದ ಸಮರ್ಪಣೆಯೊಂದಿಗೆ ಮುಕ್ತಾಯಗೊಳಿಸಿದರು. ಕಾರ್ಯಕ್ರಮವನ್ನು ಡಾ. ಶರತ್ ಮತ್ತು ಕುಮಾರಿ ನಿಧಿ ನಿರೂಪಿಸಿದರು.