image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾರಿಂಜೇಶ್ವರ ಬೆಟ್ಟದಲ್ಲಿ ಜೂನ್‌ 21ರಂದು ಬೃಹತ್‌ 'ಯೋಗ ವಿದ್‌ ಯೋಧ' ಕಾರ್ಯಕ್ರಮ: ಸಂಸದ ಕ್ಯಾ. ಚೌಟ ಆಹ್ವಾನ

ಕಾರಿಂಜೇಶ್ವರ ಬೆಟ್ಟದಲ್ಲಿ ಜೂನ್‌ 21ರಂದು ಬೃಹತ್‌ 'ಯೋಗ ವಿದ್‌ ಯೋಧ' ಕಾರ್ಯಕ್ರಮ: ಸಂಸದ ಕ್ಯಾ. ಚೌಟ ಆಹ್ವಾನ

ಮಂಗಳೂರು : ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಈ ಬಾರಿ ಭೂಕೈಲಾಸವೆಂದೇ ಪ್ರಸಿದ್ಧವಾಗಿರುವ ಐತಿಹಾಸಿಕ ಶ್ರೀ ಕ್ಷೇತ್ರ ಕಾರಿಂಜೇಶ್ವರದಲ್ಲಿ ಬೃಹತ್‌ ’ಯೋಗ ವಿದ್ ಯೋಧ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡದ ಕೊಡ್ಯಾಮಲೆ ಬೆಟ್ಟಗಳ ಶ್ರೇಣಿಯಲ್ಲಿರುವ ಪ್ರಕೃತಿ ರಮಣೀಯ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಆವರಣದಲ್ಲಿ ಜೂನ್‌ 21ರ ಭಾನುವಾರ ಅಪರಾಹ್ನ 3 ಗಂಟೆಗೆ ಈ ಯೋಗಾಭ್ಯಾಸ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಆಹ್ವಾನ ನೀಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆರಂಭಗೊಂಡ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದ್ದು, ವಿಶ್ವದಾದ್ಯಂತ 180ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲ್ಪಡುತ್ತಿದೆ. ಈ ಬಾರಿಯ 12ನೇ ವಿಶ್ವ ಯೋಗ ದಿನವನ್ನು "ಆರೋಗ್ಯಕರ ವಯಸ್ಸಿಗೆ ಯೋಗ" (Yoga for Healthy Ageing) ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದ್ದು, ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಯೋಗದ ಪಾತ್ರ ಅಪಾರವಾಗಿದೆ. ಪ್ರಕೃತಿಯ ಮಡಲಿನಲ್ಲಿ ಕಂಗೊಳಿಸುವ ಕಾರಿಂಜೇಶ್ವರ ಕ್ಷೇತ್ರದ ಬೆಟ್ಟದ ಆವರಣದಲ್ಲಿ ನಡೆಯಲಿರುವ ಈ 3ನೇ ಆವೃತ್ತಿಯ ವಿಶೇಷ ಯೋಗಾಭ್ಯಾಸವು ಪ್ರಸಿದ್ಧ ಯೋಗಪಟು ಗೋಪಾಲಕೃಷ್ಣ ದೇಲಂಪಾಡಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ ವಿದ್ಯಾರ್ಥಿಗಳು, ನಿವೃತ್ತ ಯೋಧರು, ಗಣ್ಯರು, ಯೋಗಾಸಕ್ತರು ಹಾಗೂ ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದು, ಆಧ್ಯಾತ್ಮಿಕ ಮತ್ತು ದೈಹಿಕ ಚೈತನ್ಯವನ್ನು ಪಡೆದುಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶವಾಗಿದೆ ಎಂದು ಸಂಸದರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ವಿಶೇಷ ಉದ್ದೇಶದಿಂದ 'ಯೋಗ ವಿದ್ ಯೋಧ' ಕಾರ್ಯಕ್ರಮವನ್ನು ಜಿಲ್ಲೆಯ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಮೊದಲ ಆವೃತ್ತಿಯನ್ನು ಸಾಹಸ ಜಲಕ್ರೀಡೆಗಳ ತಾಣವಾದ ಸಸಿಹಿತ್ಲುವಿನಲ್ಲಿ ಹಾಗೂ 2ನೇ ಆವೃತ್ತಿಯನ್ನು ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಕಡಲ ಕಿನಾರೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಈ ಬಾರಿ ಸಮುದ್ರ ಮಟ್ಟದಿಂದ ಸುಮಾರು 1500 ಅಡಿ ಎತ್ತರದಲ್ಲಿರುವ ಸುಂದರ ಕಾರಿಂಜ ಬೆಟ್ಟದಲ್ಲಿ ಕಾರ್ಯಕ್ರಮ ರೂಪಿಸಲಾಗಿದ್ದು, ಈ ಮೂಲಕ ಜಿಲ್ಲೆಯ ಅದ್ಭುತ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವಂತೆ ಮಾಡುವುದು ನಮ್ಮ ಆಶಯವಾಗಿದೆ. ಕರಾವಳಿಯ ಶ್ರೀಮಂತ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವ ಈ ಸಣ್ಣ ಪ್ರಯತ್ನಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ಜಿಲ್ಲೆಯ ಗೌರವಾನ್ವಿತ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು, ಮಾಧ್ಯಮ ಮಿತ್ರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡಿ, ಕ್ಷೇತ್ರದ ದಿವ್ಯತೆಯನ್ನು ಸಾರುವ ಆಕರ್ಷಕ ಕಟೆಂಟ್‌ಗಳನ್ನು ಸೃಷ್ಟಿಸುವ ಮೂಲಕ ದೇಶ-ವಿದೇಶಗಳ ಪ್ರವಾಸಿಗರು ಈ ಪವಿತ್ರ ತಾಣಕ್ಕೆ ಭೇಟಿ ನೀಡುವಂತೆ ಪ್ರೇರೇಪಿಸಬೇಕು ಎಂದು ಸಂಸದ ಕ್ಯಾ. ಚೌಟ ಅವರು ಮನವಿ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ