image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿಎ ಅಂತಿಮ ಪರೀಕ್ಷೆ : ಆಳ್ವಾಸ್‌ನ ದೀಪಕ್‌ಗೆ ದೇಶಕ್ಕೇ 28ನೇ ರ‍್ಯಾಂಕ್, 8 ವಿದ್ಯಾರ್ಥಿಗಳು ಉತ್ತೀರ್ಣ

ಸಿಎ ಅಂತಿಮ ಪರೀಕ್ಷೆ : ಆಳ್ವಾಸ್‌ನ ದೀಪಕ್‌ಗೆ ದೇಶಕ್ಕೇ 28ನೇ ರ‍್ಯಾಂಕ್, 8 ವಿದ್ಯಾರ್ಥಿಗಳು ಉತ್ತೀರ್ಣ

ಮೂಡುಬಿದಿರೆ : ಮೇ 2026ರಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿ ಕಾಲೇಜಿನ ದೀಪಕ್ ಹೆಗ್ಡೆ ಅಖಿಲ ಭಾರತ ಮಟ್ಟದಲ್ಲಿ 28ನೇ ರ‍್ಯಾಂಕ್ ಗಳಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಇವರೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಒಟ್ಟು 8 ವಿದ್ಯಾರ್ಥಿಗಳು ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಮೋಘ ಸಾಧನೆ ತೋರಿದ್ದಾರೆ. ಪರೀಕ್ಷೆಯಲ್ಲಿ ತೇರ್ಗಡೆಯಾದ ಸಾಧಕರಲ್ಲಿ ದೀಪಕ್ ಹೆಗ್ಡೆ, ನಿತೇಶ್ ಕಾಮತ್, ವೀಕ್ಷಾ ಶೆಟ್ಟಿ, ನಾಗರಾಜ ಮಂಜಿತ್ತಾಯ, ಪ್ರಣವ್ ಎಸ್ ಭಟ್, ವೈಷ್ಣವಿ ಜವಾರ್, ಅಕ್ಷಯ ಬಿ.ಎಸ್. ಮತ್ತು ಸುದೀಪ್ ಸೇರಿದ್ದಾರೆ.

ವಿಶೇಷವೆಂದರೆ, 28ನೇ ರ‍್ಯಾಂಕ್ ಪಡೆದ ದೀಪಕ್ ಹೆಗ್ಡೆ ಅವರು ಆಳ್ವಾಸ್ ಸಂಸ್ಥೆಯ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯಡಿ ಉಚಿತ ಶಿಕ್ಷಣದ ಸೌಲಭ್ಯ ಪಡೆದು ತಮ್ಮ ಪ್ರೌಢಶಿಕ್ಷಣ, ಪದವಿಪೂರ್ವ ಹಾಗೂ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಈ ಹಿಂದೆ ಪದವಿ ವ್ಯಾಸಂಗದ ಅವಧಿಯಲ್ಲೇ ಸಿಎ ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲೂ ದೇಶಕ್ಕೆ 10ನೇ ರ‍್ಯಾಂಕ್ ಗಳಿಸಿದ್ದ ಇವರು, ಇದೀಗ ಸಿಎ ಅಂತಿಮ ಪರೀಕ್ಷೆಯ ಎರಡೂ ಗ್ರೂಪ್‌ಗಳನ್ನು ಮೊದಲ ಪ್ರಯತ್ನದಲ್ಲೇ ಪಾಸು ಮಾಡಿ 28ನೇ ರ‍್ಯಾಂಕ್ ಮುಡಿಗೇರಿಸಿಕೊಳ್ಳುವ ಮೂಲಕ ಮತ್ತೊಂದು ಐತಿಹಾಸಿಕ ಸಾಧನೆ ಬರೆದಿದ್ದಾರೆ.

ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಸಿಎ ಅಂತಿಮ ಪರೀಕ್ಷೆಯಲ್ಲಿ ದೇಶದಲ್ಲೇ ಶ್ರೇಷ್ಠ ರ‍್ಯಾಂಕ್‌ಗಳನ್ನು ಪಡೆಯುತ್ತಿರುವುದು ಸಂಸ್ಥೆಯ ಗುಣಮಟ್ಟದ ಶಿಕ್ಷಣ ಮತ್ತು ಫಲಿತಾಂಶ ಕೇಂದ್ರಿತ ತರಬೇತಿಗೆ ಸಾಕ್ಷಿಯಾಗಿದೆ. ಈಗಾಗಲೇ ಅಖಿಲ ಭಾರತ ಮಟ್ಟದಲ್ಲಿ 6, 10, 23, 28, 33ನೇ ರ‍್ಯಾಂಕ್‌ಗಳ ಜೊತೆಗೆ ನೂರಾರು ವಿದ್ಯಾರ್ಥಿಗಳು ಸಿಎ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಿರುವುದು ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಅಧ್ಯಾಪಕರ ಸಮರ್ಪಿತ ಮಾರ್ಗದರ್ಶನ ಮತ್ತು ಸಂಸ್ಥೆಯ ಶೈಕ್ಷಣಿಕ ಬದ್ಧತೆಗೆ ಸಂದ ಗೌರವವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಅಸಾಧಾರಣ ಸಾಧನೆಗೈದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲರಾದ ಡಾ. ಕುರಿಯನ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಹಾಗೂ ಸಿಎ ಸಂಯೋಜಕಿ ಅಪರ್ಣಾ ಅವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

Category
ಕರಾವಳಿ ತರಂಗಿಣಿ