image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾರಿಂಜೇಶ್ವರ ಬೆಟ್ಟದಲ್ಲಿ ಜೂ. 21ರಂದು ’ಯೋಗ ವಿದ್ ಯೋಧ’ ಬೃಹತ್ ಯೋಗಾಭ್ಯಾಸ ಕಾರ್ಯಕ್ರಮ

ಕಾರಿಂಜೇಶ್ವರ ಬೆಟ್ಟದಲ್ಲಿ ಜೂ. 21ರಂದು ’ಯೋಗ ವಿದ್ ಯೋಧ’ ಬೃಹತ್ ಯೋಗಾಭ್ಯಾಸ ಕಾರ್ಯಕ್ರಮ

ಮಂಗಳೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಈ ಬಾರಿ ದಕ್ಷಿಣ ಕನ್ನಡದ ಐತಿಹಾಸಿಕ ಮತ್ತು ಪ್ರಕೃತಿ ರಮಣೀಯ ತಾಣವಾದ ಶ್ರೀ ಕ್ಷೇತ್ರ ಕಾರಿಂಜೇಶ್ವರ ಬೆಟ್ಟದಲ್ಲಿ ’ಯೋಗ ವಿದ್ ಯೋಧ’ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಜೂನ್ 21ರ ಭಾನುವಾರ ಅಪರಾಹ್ನ 3 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮವು ಯೋಗ ದಿನಾಚರಣೆಯ 3ನೇ ಆವೃತ್ತಿಯಾಗಿದ್ದು, ಯೋಗಪಟು ಗೋಪಾಲಕೃಷ್ಣ ದೇಲಂಪಾಡಿ ಅವರ ಮಾರ್ಗದರ್ಶನದಲ್ಲಿ ಈ ಯೋಗಾಭ್ಯಾಸ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಯೋಗ ದಿನಾಚರಣೆಯ ಈ ಬಾರಿಯ ಧ್ಯೇಯವಾಕ್ಯ "ಆರೋಗ್ಯಕರ ವಯಸ್ಸಿಗೆ ಯೋಗ" ಎಂಬುದಾಗಿದೆ. ಪ್ರಕೃತಿಯ ಮಡಲಿನಲ್ಲಿ, ಸಮುದ್ರ ಮಟ್ಟದಿಂದ 1500 ಅಡಿ ಎತ್ತರದಲ್ಲಿರುವ ಕಾರಿಂಜೇಶ್ವರ ಕ್ಷೇತ್ರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ನಿವೃತ್ತ ಯೋಧರು, ಗಣ್ಯರು ಹಾಗೂ ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಕರಾವಳಿಯ ಶ್ರೀಮಂತ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಪವಿತ್ರ ತಾಣದ ದಿವ್ಯತೆಯನ್ನು ದೇಶ-ವಿದೇಶಗಳಿಗೆ ಸಾರುವಂತೆ ಸಂಸದರು ಮನವಿ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ