image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗೋವಾದಲ್ಲಿ ಎಂ.ಆರ್.ಜಿ. ಸಮೂಹದಿಂದ ‘ಗೋಲ್ಡ್ ಫಿಂಚ್’ ಹೋಟೆಲ್ ಉದ್ಘಾಟನೆ: ಆತಿಥ್ಯ ಕ್ಷೇತ್ರಕ್ಕೆ ಮತ್ತೊಂದು ಮೈಲಿಗಲ್ಲು

ಗೋವಾದಲ್ಲಿ ಎಂ.ಆರ್.ಜಿ. ಸಮೂಹದಿಂದ ‘ಗೋಲ್ಡ್ ಫಿಂಚ್’ ಹೋಟೆಲ್ ಉದ್ಘಾಟನೆ: ಆತಿಥ್ಯ ಕ್ಷೇತ್ರಕ್ಕೆ ಮತ್ತೊಂದು ಮೈಲಿಗಲ್ಲು

ಮಂಗಳೂರು : ಭಾರತದ ಪ್ರವಾಸೋದ್ಯಮ ನಕ್ಷೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಗೋವಾ, ತನ್ನ ಸೂರ್ಯಕಿರಣಗಳಿಂದ ಕಂಗೊಳಿಸುವ ಕಡಲತೀರಗಳು, ಸಮೃದ್ಧ ಸಾಂಸ್ಕೃತಿಕ ಪರಂಪರೆ ಹಾಗೂ ಅಪರೂಪದ ನೈಸರ್ಗಿಕ ಸೌಂದರ್ಯದಿಂದ ದೇಶ-ವಿದೇಶಗಳ ಪ್ರವಾಸಿಗರನ್ನು ನಿರಂತರವಾಗಿ ಆಕರ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗೋವಾದ ರಾಜಧಾನಿಯಾದ ಪಣಜಿಯ ಹೃದಯಭಾಗದಲ್ಲಿ ನೆಲೆಗೊಂಡಿರುವ ‘ಗೋಲ್ಡ್ ಫಿಂಚ್ ಪಣಜಿ ಗೋವಾ’ ಅತ್ಯಾಧುನಿಕ ಆತಿಥ್ಯ ಸೇವೆಗಳನ್ನು ಗೋವಾದ ವಿಶಿಷ್ಟ ಸೊಬಗಿನೊಂದಿಗೆ ಸಂಯೋಜಿಸಿ ಪ್ರವಾಸಿಗರಿಗೆ ಹೊಸ ಅನುಭವವನ್ನು ನೀಡಲು ಆರಂಭಿಸಿದೆ. ಸುಂದರ ಮಂಡೋವಿ ನದಿಯ ನೋಟವನ್ನು ಹೊಂದಿರುವ ಈ ಹೋಟೆಲ್, ಗೋಲ್ಡ್ ಫಿಂಚ್ ಹಾಸ್ಪಿಟಾಲಿಟಿಯ ದೇಶಾದ್ಯಂತ ಬೆಳೆಯುತ್ತಿರುವ ಹೋಟೆಲ್ ಜಾಲಕ್ಕೆ ಹೊಸ ಸೇರ್ಪಡೆಯಾಗಿದೆ. ವ್ಯಾಪಾರ ಮತ್ತು ಪ್ರವಾಸ ಉದ್ದೇಶದ ಅತಿಥಿಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಹೋಟೆಲ್, ಆರಾಮ, ಅನುಕೂಲತೆ ಮತ್ತು ಆಧುನಿಕ ಸೊಬಗನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತದೆ.

ಒಟ್ಟು 98 ಸುಸಜ್ಜಿತ ಕೊಠಡಿಗಳನ್ನು ಹೊಂದಿರುವ ಈ ಹೋಟೆಲ್‌ನಲ್ಲಿ ಏಳು ವಿಶಾಲ ಸೂಟ್‌ಗಳಿವೆ. ಆಧುನಿಕ ಸೌಲಭ್ಯಗಳು, ವಿಶಾಲ ಲಾಬಿ, ಹಸಿರು ಪರಿಸರ ಹಾಗೂ ಆಕರ್ಷಕ ಒಳಾಂಗಣ ವಿನ್ಯಾಸಗಳು ಗೋವಾದ ನಿರಾಳ ಮತ್ತು ಉತ್ಸಾಹಭರಿತ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತವೆ. ಹೋಟೆಲ್‌ನ ಪ್ರಮುಖ ಆಕರ್ಷಣೆಯಾದ ‘ಬಂಜಾರಾ’ ರೆಸ್ಟೋರೆಂಟ್ ದಿನಪೂರ್ತಿ ಆಹಾರ ಸೇವೆಯನ್ನು ಒದಗಿಸುತ್ತಿದ್ದು, ಅಂತರರಾಷ್ಟ್ರಿಯ ಖಾದ್ಯಗಳ ಜೊತೆಗೆ ಸ್ಥಳೀಯ ಸುವಾಸನೆಗಳನ್ನೊಳಗೊಂಡ ವೈವಿಧ್ಯಮಯ ಪಾಕಶೈಲಿಯನ್ನು ಅತಿಥಿಗಳಿಗೆ ಪರಿಚಯಿಸುತ್ತದೆ.

ಈ ಕುರಿತು ಎಂ.ಆರ್.ಜಿ. ಸಮೂಹದ ಸ್ಥಾಪಕಾಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ದೀರ್ಘಕಾಲ ಸಮಾಜಕ್ಕೆ ಉಪಯುಕ್ತವಾಗುವ ಸಂಸ್ಥೆಗಳು ಮತ್ತು ಯೋಜನೆಗಳನ್ನು ನಿರ್ಮಿಸುವುದೇ ಎಂ.ಆರ್.ಜಿ. ಸಮೂಹದ ಆಶಯವಾಗಿದೆ ಎಂದು ತಿಳಿಸಿದರು. ಗೋಲ್ಡ್‌ಫಿಂಚ್ ಪಣಜಿ ಗೋವಾದ ಆರಂಭವು ಆತಿಥ್ಯ ಕ್ಷೇತ್ರದಲ್ಲಿ ನಮ್ಮ ಬೆಳವಣಿಗೆಯ ಪಯಣದ ಮತ್ತೊಂದು ಮಹತ್ವದ ಹೆಜ್ಜೆಯಾಗಿದ್ದು, ಮುಂದೆಯೂ ಸುಸ್ಥಿರ ಬೆಳವಣಿಗೆ, ಉತ್ತಮ ಸೇವೆ ಮತ್ತು ಅತಿಥಿಗಳಿಗೆ ಮರೆಯಲಾಗದ ಅನುಭವಗಳನ್ನು ನೀಡುವ ಮೂಲಕ ನಮ್ಮೊಂದಿಗೆ ಕೈಜೋಡಿಸಿರುವ ಎಲ್ಲರಿಗೂ ದೀರ್ಘಕಾಲಿಕ ಮೌಲ್ಯವನ್ನು ಸೃಷ್ಟಿಸುವ ಪ್ರಯತ್ನವನ್ನು ಮುಂದುವರಿಸುತ್ತೇವೆ ಎಂದರು.

ಅದೇ ರೀತಿ ಎಂ.ಆರ್.ಜಿ. ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಗೌರವ್ ಶೆಟ್ಟಿ ಮಾತನಾಡಿ, ಗೋಲ್ಡ್ ಫಿಂಚ್ ಪಣಜಿ ಗೋವಾದ ಆರಂಭವು ಸಮೂಹದ ಬೆಳವಣಿಗೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದರು. ಸಂಸ್ಕೃತಿ, ಮನರಂಜನೆ ಹಾಗೂ ನೈಸರ್ಗಿಕ ಸೌಂದರ್ಯದ ಅಪೂರ್ವ ಸಂಗಮವಾಗಿರುವ ಗೋವಾದ ಈ ಕ್ರಿಯಾಶೀಲ ಮಾರುಕಟ್ಟೆಯಲ್ಲಿ ನಮ್ಮ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಪಣಜಿಯ ಹೃದಯಭಾಗಕ್ಕೆ ಗೋಲ್ಡ್ ಫಿಂಚ್ ಅನುಭವವನ್ನು ತರುವ ಅವಕಾಶ ದೊರೆತಿರುವುದು ಸಂತಸದ ಸಂಗತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಎಂ.ಆರ್.ಜಿ. ಸಮೂಹದ ಆತಿಥ್ಯ ವಿಭಾಗವಾದ ಗೋಲ್ಡ್ ಫಿಂಚ್ ಹಾಸ್ಪಿಟಾಲಿಟಿ ಈಗಾಗಲೇ ಬೆಂಗಳೂರು, ಮಂಗಳೂರು, ಮುಂಬೈ, ದೆಹಲಿ ಹಾಗೂ ಸಕಲೇಶಪುರ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತನ್ನ ಹೋಟೆಲ್ ಜಾಲವನ್ನು ವಿಸ್ತರಿಸಿದೆ. ಇದರೊಂದಿಗೆ ಕೋರ್ಟ್‌ಯಾರ್ಡ್ ಬೈ ಮ್ಯಾರಿಯಟ್ (ಹೆಬ್ಬಾಳ, ಬೆಂಗಳೂರು), ಮ್ಯಾರಿಯಟ್ (ನವಿ ಮುಂಬೈ) ಮತ್ತು ಡಬಲ್‌ಟ್ರೀ ಬೈ ಹಿಲ್ಟನ್ (ಪಣಜಿ, ಗೋವಾ) ಸಂಸ್ಥೆಗಳನ್ನು ಸ್ವಾಮ್ಯ ಹಾಗೂ ನಿರ್ವಹಣೆ ಮಾಡುತ್ತಿದೆ.

ಅಷ್ಟೇ ಅಲ್ಲದೆ, ಸಕಲೇಶಪುರ, ಚಿಕ್ಕಮಗಳೂರು ಮತ್ತು ಗೋವಾದಲ್ಲಿ ಜೆಡಬ್ಲ್ಯು ಮ್ಯಾರಿಯಟ್ ಹಾಗೂ ಹಿಲ್ಟನ್ ರಿಸಾರ್ಟ್ ಸೇರಿದಂತೆ ಹಲವು ಪ್ರಮುಖ ಯೋಜನೆಗಳು ನಿರ್ಮಾಣ ಹಂತದಲ್ಲಿವೆ. ಆತಿಥ್ಯ ಕ್ಷೇತ್ರದಲ್ಲಿನ ತನ್ನ ವಿಸ್ತರಣೆಯ ವೇಗವನ್ನು ಮುಂದುವರಿಸಿಕೊಂಡಿರುವ ಎಂ.ಆರ್.ಜಿ. ಸಮೂಹವು 2035ರ ವೇಳೆಗೆ 3,500ಕ್ಕೂ ಹೆಚ್ಚು ಕೊಠಡಿಗಳ ಸಾಮರ್ಥ್ಯ ಹೊಂದುವ ದೂರದೃಷ್ಟಿಯ ಗುರಿಯನ್ನು ಹೊಂದಿದೆ.

Category
ಕರಾವಳಿ ತರಂಗಿಣಿ