image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗಂಜಿಮಠ ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿಗೆ ವೇಗ: ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ, ಪ್ರಗತಿ ಪರಿಶೀಲನೆ

ಗಂಜಿಮಠ ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿಗೆ ವೇಗ: ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ, ಪ್ರಗತಿ ಪರಿಶೀಲನೆ

ದಕ್ಷಿಣ ಕನ್ನಡ : ಜಿಲ್ಲೆಯ ಆರ್ಥಿಕ ಹಾಗೂ ಕೈಗಾರಿಕಾ ರಂಗಕ್ಕೆ ಹೊಸ ಶಕ್ತಿ ತುಂಬಲಿರುವ ಗಂಜಿಮಠದ ಮಹತ್ವಾಕಾಂಕ್ಷೆಯ ಪ್ಲಾಸ್ಟಿಕ್ ಪಾರ್ಕ್ ಯೋಜನಾ ಪ್ರದೇಶಕ್ಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೇಟಿಯ ವೇಳೆ ಪಾರ್ಕ್‌ನ ರಸ್ತೆ, ವಿದ್ಯುತ್, ನೀರು ಸರಬರಾಜು ಸೇರಿದಂತೆ ಪ್ರಮುಖ ಮೂಲಸೌಕರ್ಯ ಕಾಮಗಾರಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಸಂಸದರು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಶೀಘ್ರದಲ್ಲೇ ಪೂರ್ಣ ಪ್ರಮಾಣದ ವಾಣಿಜ್ಯ ಚಟುವಟಿಕೆಗಳಿಗೆ ಚಾಲನೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದಾರೆ.

ಗಂಜಿಮಠದ 104 ಎಕರೆ ವಿಸ್ತೀರ್ಣದಲ್ಲಿ ತಲೆಯೆತ್ತುತ್ತಿರುವ ಈ ಬೃಹತ್ ಯೋಜನೆಗೆ ಕೇಂದ್ರದ ಮಾಜಿ ಸಚಿವ ದಿವಂಗತ ಡಿ. ಅನಂತ ಕುಮಾರ್ ಅವರು ರಾಸಾಯನಿಕ ಸಚಿವರಾಗಿದ್ದಾಗ ಮಂಜೂರಾತಿ ನೀಡಿದ್ದರು. ಆದರೆ, 9.33 ಎಕರೆ ಭೂಸ್ವಾಧೀನ ಪ್ರಕ್ರಿಯೆಯು ನ್ಯಾಯಾಲಯದ ವಿವಾದದಲ್ಲಿದ್ದ ಕಾರಣ ಯೋಜನೆ ಸುದೀರ್ಘ ಕಾಲ ನನೆಗುದಿಗೆ ಬಿದ್ದಿತ್ತು. ಕ್ಯಾ. ಬ್ರಿಜೇಶ್ ಚೌಟ ಅವರು ಸಂಸದರಾಗಿ ಆಯ್ಕೆಯಾದ ತಕ್ಷಣವೇ ಈ ಯೋಜನೆಗೆ ಆದ್ಯತೆ ನೀಡಿ, ವಿವಾದಿತ ಜಾಗವನ್ನು ಸದ್ಯಕ್ಕೆ ಕೈಬಿಟ್ಟು ಲಭ್ಯವಿರುವ ಭೂಮಿಯಲ್ಲೇ ಪರಿಷ್ಕೃತ ಯೋಜನೆ ಸಿದ್ಧಪಡಿಸಿ ಶೀಘ್ರ ಅನುಷ್ಠಾನಕ್ಕೆ ತರುವಂತೆ ಕೆಐಎಡಿಬಿ ಮುಖ್ಯ ಎಂಜಿನಿಯರ್‌ಗೆ ನಿರ್ದೇಶನ ನೀಡಿದ್ದರು. ಅದರಂತೆ ನವೆಂಬರ್ 2024ರಲ್ಲಿ ಸಿಪೆಟ್ (CIPET) ಆಡಳಿತ ಕಟ್ಟಡದ ಪರಿಷ್ಕೃತ ನಕ್ಷೆಗೆ ಅಧಿಕೃತ ಅನುಮೋದನೆ ದೊರೆತು ಮರು ನಿರ್ಮಾಣ ಕಾರ್ಯ ಚುರುಕುಗೊಂಡಿತ್ತು. ಆ ಬಳಿಕ ಎದುರಾಗಿದ್ದ ಕಾನೂನು ಅಡೆತಡೆಗಳನ್ನು ಅಕ್ಟೋಬರ್ 2025ರಲ್ಲಿ ರಿಟ್ ಅಪೀಲ್ ವಜಾಗೊಳ್ಳುವ ಮೂಲಕ ಸಂಪೂರ್ಣವಾಗಿ ನಿವಾರಿಸಲಾಯಿತು. ಮುಂದುವರಿದ ಭಾಗವಾಗಿ, ಮಾರ್ಚ್ 2026ರಲ್ಲಿ ಪಾರ್ಕ್‌ನ ಪರಿಷ್ಕೃತ ವಿನ್ಯಾಸದ ನಕ್ಷೆಗೆ ಸರ್ಕಾರದ ಅನುಮೋದನೆ ದೊರೆತಿದ್ದು, ಏಪ್ರಿಲ್ 2026ರಲ್ಲಿ ಉದ್ಯಮಿಗಳಿಗೆ ಕೈಗಾರಿಕಾ ಪ್ಲಾಟ್‌ಗಳ ಹಂಚಿಕೆ ಪ್ರಕ್ರಿಯೆಗಾಗಿ ಕೆಐಎಡಿಬಿ ವತಿಯಿಂದ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಕರಾವಳಿಯ ಆರ್ಥಿಕತೆ ಹಾಗೂ ಕೈಗಾರಿಕಾ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಈ ಪ್ಲಾಸ್ಟಿಕ್ ಪಾರ್ಕ್ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದು ಸ್ಥಳೀಯ ಯುವಕರಿಗೆ ದೊಡ್ಡ ಮಟ್ಟದ ಉದ್ಯೋಗಾವಕಾಶ ಕಲ್ಪಿಸುವುದಲ್ಲದೆ, ಪರಿಸರ ಪೂರಕ ನಿಯಮಗಳನ್ನು ಪಾಲಿಸಿಕೊಂಡು ಜಿಲ್ಲೆಯ ಕೈಗಾರಿಕಾ ವಿಕಾಸಕ್ಕೆ ಹೊಸ ವೇಗ ನೀಡಲಿದೆ ಎಂದರು. ಸದ್ಯ ಪ್ಲಾಸ್ಟಿಕ್‌ ಪಾರ್ಕ್‌ನ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಸಿಪೆಟ್ ಆಡಳಿತ ಮಂಡಳಿ ಕಟ್ಟಡದ ನಿರ್ಮಾಣ ಕಾರ್ಯವು ಅಂತಿಮ ಹಂತದಲ್ಲಿದೆ. ಹೀಗಾಗಿ ಆಸಕ್ತ ಉದ್ಯಮಿಗಳು ಮುಂದೆ ಬಂದು ಇಲ್ಲಿನ ಕೈಗಾರಿಕಾ ಪ್ಲಾಟ್‌ಗಳನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.

 

Category
ಕರಾವಳಿ ತರಂಗಿಣಿ