image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿರಿ ಸಂಸ್ಥೆಯ ವತಿಯಿಂದ ಧರ್ಮಸ್ಥಳದ ಎ.ವಿ. ಶೆಟ್ಟಿ ದಂಪತಿಗಳಿಗೆ ಸನ್ಮಾನ ಹಾಗೂ ಹುಟ್ಟುಹಬ್ಬದ ಸಂಭ್ರಮ

ಸಿರಿ ಸಂಸ್ಥೆಯ ವತಿಯಿಂದ ಧರ್ಮಸ್ಥಳದ ಎ.ವಿ. ಶೆಟ್ಟಿ ದಂಪತಿಗಳಿಗೆ ಸನ್ಮಾನ ಹಾಗೂ ಹುಟ್ಟುಹಬ್ಬದ ಸಂಭ್ರಮ

ಉಜಿರೆ: ಬೆಳ್ತಂಗಡಿಯ ರೆಂಕೆದಗುತ್ತುವಿನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿ ಪ್ರತಿ ತಿಂಗಳು ಆಚರಿಸುವ ಸಿರಿ ಸಿಬ್ಬಂದಿಗಳ ಹುಟ್ಟುಹಬ್ಬ ಕಾರ್ಯಕ್ರಮವು 16-06-2026 ರಂದು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಜೂನ್ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಿಬ್ಬಂದಿಗಳಿಗೆ ಹಾಗೂ ಸಂಸ್ಥೆಗೆ ಹೊಸದಾಗಿ ಸೇರ್ಪಡೆಗೊಂಡ ಸಿಬ್ಬಂದಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೂಜ್ಯ ಹೆಗ್ಗಡೆಯವರು ಹಾಗೂ ಮಾತೋಶ್ರೀ ಹೇಮಾವತಿ ಅಮ್ಮನವರು ಮಹಿಳಾ ಸಬಲೀಕರಣದ ಧ್ಯೇಯೋದ್ದೇಶದಿಂದ ಪ್ರಾರಂಭಿಸಿರುವ ಸಿರಿ ಸಂಸ್ಥೆಯಲ್ಲಿ ಎಲ್ಲರೂ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ದುಡಿಯುವ ಮೂಲಕ ಸಿರಿ ಬ್ರ್ಯಾಂಡ್ ಅನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯಬೇಕು, ತನ್ಮೂಲಕ ಪೂಜ್ಯ ದಂಪತಿಗಳ ಕನಸನ್ನು ನನಸಾಗಿಸಬೇಕೆಂದು ಪ್ರೇರಣಾತ್ಮಕ ನುಡಿಗಳನ್ನಾಡಿದರು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್. ಜನಾರ್ಧನ ಅವರು, ಎ.ವಿ. ಶೆಟ್ಟಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಅರುಣ ವಿ. ಶೆಟ್ಟಿ ಅವರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು. ಸಂಸ್ಥೆಯ ಸಮಗ್ರ ಏಳಿಗೆಗಾಗಿ ಸತತವಾಗಿ ಶ್ರಮಿಸುತ್ತಾ ಸಂಪೂರ್ಣ ಸಹಕಾರ ನೀಡುತ್ತಿರುವ ಎ.ವಿ. ಶೆಟ್ಟಿ ದಂಪತಿಗಳಿಗೆ ಈ ಸಂದರ್ಭದಲ್ಲಿ ಎಲ್ಲ ಸಿರಿ ಸಿಬ್ಬಂದಿಗಳ ಪರವಾಗಿ ಆತ್ಮೀಯವಾಗಿ ಗೌರವಾರ್ಪಣೆ ಸಲ್ಲಿಸಲಾಯಿತು. ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ಧನ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಸಿಬ್ಬಂದಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಪರಮಪೂಜ್ಯ ಖಾವಂದರು ಲೋಕಕಲ್ಯಾಣಾರ್ಥವಾಗಿ ನಡೆಸುತ್ತಿರುವ ವಿವಿಧ ಕಾರ್ಯಚಟುವಟಿಕೆಗಳ ಕುರಿತಾದ ವಿಡಿಯೋವನ್ನು ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಿರಿ ಕ್ಲಬ್ ಅಧ್ಯಕ್ಷೆ ಶ್ರೀಮತಿ ಉಷಾ, ಎಸ್.ಡಿ.ಎಂ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಿರಿ ಸಂಸ್ಥೆಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಿರಿ ಸಂಸ್ಥೆಯ ಜೀವನ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರೆ, ಮುಖ್ಯ ನಿರ್ವಹಣಾಧಿಕಾರಿ ಪ್ರಸನ್ನ ಅವರು ವಂದಿಸಿದರು.

Category
ಕರಾವಳಿ ತರಂಗಿಣಿ