image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕುಳಾಯಿ ಕುಲಾಲ ಸಂಘದಿಂದ ವಿದ್ಯಾರ್ಥಿಗಳಿಗೆ 1.25 ಲಕ್ಷ ಮೌಲ್ಯದ ಶೈಕ್ಷಣಿಕ ಸವಲತ್ತು ವಿತರಣೆ

ಕುಳಾಯಿ ಕುಲಾಲ ಸಂಘದಿಂದ ವಿದ್ಯಾರ್ಥಿಗಳಿಗೆ 1.25 ಲಕ್ಷ ಮೌಲ್ಯದ ಶೈಕ್ಷಣಿಕ ಸವಲತ್ತು ವಿತರಣೆ

ಸುರತ್ಕಲ್: ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನೀಡುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಕಷ್ಟ ಕಾಲದಲ್ಲಿ ಸಂಘವು ಸಮುದಾಯಕ್ಕೆ ನೆರವಾಗಲಿದೆ ಎಂಬ ಆತ್ಮಸ್ಥೈರ್ಯ ಮೂಡಿಸುವ ಕಾರ್ಯವನ್ನು ಕುಳಾಯಿ ಕುಲಾಲ ಸಂಘ ಮಾಡುತ್ತಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಶ್ಲಾಘಿಸಿದರು. ಅವರು ಕುಳಾಯಿ ವೆಂಕಟರಮಣ ಶಾಲೆಯ ಸಭಾಭವನದಲ್ಲಿ ಕುಳಾಯಿ ಕುಲಾಲ ಸಂಘ, ಮಹಿಳಾ ಮಂಡಲ ಹಾಗೂ ಕುಲಾಲ ರಜತ ಸೇವಾ ಟ್ರಸ್ಟ್ ವತಿಯಿಂದ ನಡೆದ ಶೈಕ್ಷಣಿಕ ಸವಲತ್ತು ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಧಕರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಯೂರ್ ಉಳ್ಳಾಲ್, ಪಿಹೆಚ್.ಡಿ ಪದವಿ ಪಡೆದ ಉಪನ್ಯಾಸಕಿ ಆಶಾಲತಾ, ರಾಜ್ಯ ಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ವೃಷಾ ಮತ್ತು ಶಾರ್ವರಿ ಅವರನ್ನು ಸನ್ಮಾನಿಸಲಾಯಿತು. ಸುಮಾರು 120 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಜೊತೆಗೆ ದತ್ತು ಪಡೆದ 10 ವಿದ್ಯಾರ್ಥಿಗಳಿಗೆ ನಗದು ಸಹಿತ ಸುಮಾರು 1,25,000 ರೂ. ಮೌಲ್ಯದ ಶೈಕ್ಷಣಿಕ ಸವಲತ್ತುಗಳನ್ನು ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ 12 ವಿದ್ಯಾರ್ಥಿಗಳನ್ನು ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕುಳಾಯಿ ಕುಲಾಲ ಸಂಘದ ಅಧ್ಯಕ್ಷ ಗಂಗಾಧರ್ ಬಂಜನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮನಪಾ ನಿಕಟಪೂರ್ವ ಸದಸ್ಯ ವರುಣ್ ಚೌಟ, ಎಂಆರ್‌ಪಿಎಲ್-ಒಎನ್‌ಜಿಸಿ ಚೀಫ್ ಮ್ಯಾನೇಜರ್ ದೀಪಕ್ ಅತ್ತಾವರ್, ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ, ದಿ ರೇಸ್ ಮಾಂಟೆಸರಿ ಹೌಸ್ ಆಫ್ ಚಿಲ್ಡ್ರನ್‌ನ ನಿರ್ದೇಶಕಿ ರಶ್ಮಿ ಕಿರಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಗಣೇಶ್ ಎಸ್ ಕುಲಾಲ್, ಲೋಲಾ ಹರೀಶ್, ನಾಗೇಶ್ ಕುಲಾಲ್ ಸೇರಿದಂತೆ ಹಲವು ಗಣ್ಯರು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ನಾಗೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರೆ, ಗಣೇಶ್ ಕುಲಾಲ್ ವಂದಿಸಿದರು.

Category
ಕರಾವಳಿ ತರಂಗಿಣಿ