image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಪರಿಷತ್ ಬೃಹತ್ ಪ್ರತಿಭಟನೆ ಸಂಧರ್ಭ ವಿದ್ಯಾರ್ಥಿಗಳ ಬಂಧನಕ್ಕೆ ತೀವ್ರ ಆಕ್ರೋಶ

ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಪರಿಷತ್ ಬೃಹತ್ ಪ್ರತಿಭಟನೆ ಸಂಧರ್ಭ ವಿದ್ಯಾರ್ಥಿಗಳ ಬಂಧನಕ್ಕೆ ತೀವ್ರ ಆಕ್ರೋಶ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ತಲೆದೂರಿರುವ ಮೂಲಭೂತ ಸೌಕರ್ಯಗಳ ಕೊರತೆಯನ್ನು ನೀಗಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ವಿಶ್ವವಿದ್ಯಾಲಯದ ಆಡಳಿತ ಸೌಧದ ಎದುರು ಜೂನ್ 12ರಂದು ಬೃಹತ್ ಮತ್ತು ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಒಂದು ಕಾಲದಲ್ಲಿ ದೇಶದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ಮಂಗಳೂರು ವಿಶ್ವವಿದ್ಯಾನಿಲಯವು ಕಳೆದ ಕೆಲವು ವರ್ಷಗಳಿಂದ ಆಡಳಿತ ವೈಫಲ್ಯ, ಭ್ರಷ್ಟಾಚಾರ, ನಿರ್ಲಕ್ಷ್ಯ ಹಾಗೂ ಅವ್ಯವಸ್ಥೆಯಿಂದ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಸಂಘಟನೆ ಆಪಾದಿಸಿದೆ. ಸದ್ಯ ವಿಶ್ವವಿದ್ಯಾಲಯದಲ್ಲಿ ಒಂಬತ್ತು ಪ್ರಮುಖ ಮೂಲಭೂತ ಸಮಸ್ಯೆಗಳಿದ್ದು, ಅವುಗಳಿಗೆ ಸೂಕ್ತ ಪರಿಹಾರ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ವಿದ್ಯಾರ್ಥಿ ಮುಖಂಡರು ತಿಳಿಸಿದ್ದಾರೆ. ಕನಿಷ್ಠ ಪಕ್ಷ ಕುಡಿಯುವ ನೀರಿನ ಸೌಲಭ್ಯವೂ ಸರಿಯಾಗಿಲ್ಲದ ಕಾರಣ, ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ನಂತರ ಸ್ಥಳದಲ್ಲೇ ಮೂರು ವಾಟರ್ ಫಿಲ್ಟರ್‌ಗಳನ್ನು ಮಂಜೂರು ಮಾಡಲು ಆಡಳಿತ ಮಂಡಳಿ ಒಪ್ಪಿಕೊಂಡಿದೆ.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಉಪಕುಲಪತಿಗಳ ಆದೇಶದ ಮೇರೆಗೆ ಪೊಲೀಸ್ ಇಲಾಖೆಯು ಆಡಳಿತ ಸೌಧದಲ್ಲಿದ್ದ ವಿದ್ಯಾರ್ಥಿಗಳನ್ನು ಬಂಧಿಸಿದ್ದು, ಈ ಕ್ರಮಕ್ಕೆ ವಿದ್ಯಾರ್ಥಿ ಪರಿಷತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ತಾವು ಯಾವುದೇ ಶಾಂತಿ ಕದಡುವ ಕೆಲಸ ಮಾಡಿಲ್ಲ ಮತ್ತು ಸಂವಿಧಾನದ ವಿಧಿ 19ರ ಪ್ರಕಾರ ತಮಗೆ ಪ್ರತಿಭಟಿಸುವ ಹಕ್ಕಿದೆ ಎಂದು ಹೇಳಿರುವ ಮುಖಂಡರು, ಶಾಂತಿಯುತವಾಗಿ ಹಕ್ಕಿಗಾಗಿ ಹೋರಾಡುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸ್ ಬಲದಿಂದ ಹತ್ತಿಕ್ಕಲು ಪ್ರಯತ್ನಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಖಂಡಿಸಿದ್ದಾರೆ. ಸರಿಯಾದ ಮೂಲಭೂತ ಸೌಕರ್ಯಗಳು, ಅನಗತ್ಯ ಶುಲ್ಕದ ಹೊರೆ, ಶಾಶ್ವತ ಬೋಧಕರ ಕೊರತೆ ಹಾಗೂ ಉದ್ಯೋಗಾವಕಾಶಗಳ (ಪ್ಲೇಸ್‌ಮೆಂಟ್) ಅಭಾವದಿಂದಾಗಿ ಈ ಹಿಂದೆ 3,000 ದಿಂದ 4,000 ದಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಪ್ರಸ್ತುತ 1,600 ಕ್ಕೆ ಕುಸಿದಿದೆ ಎಂದು ನಾಯಕರು ದೂರಿದ್ದಾರೆ.

ಸಮಸ್ಯೆಗಳ ಬಗ್ಗೆ ಉಪಕುಲಪತಿಗಳನ್ನು ಪ್ರಶ್ನಿಸಿದಾಗ, "ನನ್ನ ಕೈಯಲ್ಲಿ ಏನೂ ಇಲ್ಲ, ನಾನು ಮೇಲಧಿಕಾರಿಗಳು ಹಾಗೂ ಸರ್ಕಾರದಿಂದ ಆದೇಶ ಬರಲು ಕಾಯಬೇಕು. ನಿಮಗೆ ಇಷ್ಟವಿದ್ದರೆ ಈ ವಿಶ್ವವಿದ್ಯಾಲಯಕ್ಕೆ ಬನ್ನಿ, ಇಲ್ಲದಿದ್ದರೆ ಬೇರೆ ಆಯ್ಕೆಗಳನ್ನು ನೋಡಿಕೊಳ್ಳಿ" ಎಂದು ಬೇಜವಾಬ್ದಾರಿಯ ಹಾಗೂ ವಾಣಿಜ್ಯ ಮುಖದ ಹೇಳಿಕೆ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕುಲಪತಿಗಳ ಈ ಧೋರಣೆಯ ಮಾತುಗಳು ವಿದ್ಯಾರ್ಥಿಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದು, ವಿಶ್ವವಿದ್ಯಾನಿಲಯದ ಮುಖ್ಯಸ್ಥರ ಸ್ಥಾನಕ್ಕೆ ಶೋಭೆ ತರದ ವರ್ತನೆಯಾಗಿದೆ ಎಂದು ಆಕ್ಷೇಪಿಸಲಾಗಿದೆ. ವಿಶ್ವವಿದ್ಯಾಲಯದ ಉಳಿವಿಗಾಗಿ ವಿದ್ಯಾರ್ಥಿ ಪರಿಷತ್ ನಿರಂತರವಾಗಿ ಶ್ರಮಿಸುತ್ತಿದ್ದರೂ ಯಾವುದೇ ಜನಪ್ರತಿನಿಧಿಗಳು ಅಥವಾ ಮಾಧ್ಯಮಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಮುಖಂಡರು, ವಿಶ್ವವಿದ್ಯಾಲಯದ ಏಳಿಗೆಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕೆಂದು ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಕೂಡಲೇ ಈಡೇರಿಸಿ, ಅವರೊಂದಿಗೆ ಗೌರವಯುತ ಸಂವಾದ ನಡೆಸದಿದ್ದಲ್ಲಿ ವಿದ್ಯಾರ್ಥಿ ಹಿತಾಸಕ್ತಿಗಾಗಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಬಿವಿಪಿ ಎಚ್ಚರಿಕೆ ನೀಡಿದೆ. ಈ ಪತ್ರಿಕಾಗೋಷ್ಟಿಯಲ್ಲಿ ಪ್ರಾಂತ ಸಹಕಾರ್ಯದರ್ಶಿ ಸುವಿತ್ ಶೆಟ್ಟಿ, ನಗರ ಕಾರ್ಯದರ್ಶಿ ಮನು, ಮಂಗಳೂರು ವಿಶ್ವವಿದ್ಯಾಲಯದ ಸ್ಟೂಡೆಂಟ್ ಕೌನ್ಸಿಲ್ ಸೆಕ್ರೆಟರಿ ನಿಹಾರ್ ಹಾಗೂ ವಿಶ್ವವಿದ್ಯಾಲಯದ ಪ್ರೆಸಿಡೆಂಟ್ ಯಶ್ವಿನ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ