image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಜ್ಪೆಯಲ್ಲಿ 10 ಕೋಟಿ ರೂ. ವೆಚ್ಚದ ನೂತನ ಬಂಟರ ಭವನ ಶಿಲಾನ್ಯಾಸ ಹಾಗೂ ಪ್ರತಿಭಾ ಪುರಸ್ಕಾರಕ್ಕೆ ಭರದ ಸಿದ್ಧತೆ

ಬಜ್ಪೆಯಲ್ಲಿ 10 ಕೋಟಿ ರೂ. ವೆಚ್ಚದ ನೂತನ ಬಂಟರ ಭವನ ಶಿಲಾನ್ಯಾಸ ಹಾಗೂ ಪ್ರತಿಭಾ ಪುರಸ್ಕಾರಕ್ಕೆ ಭರದ ಸಿದ್ಧತೆ

ಮಂಗಳೂರು : ಬಜ್ಪೆ ವಲಯ ಬಂಟರ ಸಂಘದ ವತಿಯಿಂದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ನೂತನ ಭಂಟರ ಭವನದ ಶಿಲಾನ್ಯಾಸ, ಸಭಾ ಕಾರ್ಯಕ್ರಮ, ಶೈಕ್ಷಣಿಕ ಧನಸಹಾಯ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರಿನ ಮಾತೃ ಸಂಸ್ಥೆಗೆ ಒಳಪಟ್ಟು ಕಳೆದ 15 ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಬಜ್ಪೆ ವಲಯ ಬಂಟರ ಸಂಘವು, ಇದೀಗ ಸುಮಾರು 10 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಭವ್ಯವಾದ ಸ್ವಂತ ಭವನ ನಿರ್ಮಾಣಕ್ಕೆ ಮಹತ್ವದ ಯೋಜನೆ ರೂಪಿಸಿದೆ. ಈ ಬೃಹತ್ ಯೋಜನೆಗೆ ಮುಂಬೈನ ಭಂಟ ಸಮುದಾಯದ ಪ್ರಮುಖರು ಹಾಗೂ ಉದ್ಯಮಿಗಳು ಭರಪೂರ ಧನಸಹಾಯದ ಭರವಸೆ ನೀಡಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಂಘದ ಪ್ರಮುಖರು, ಕೇವಲ ಬಂಟ ಸಮುದಾಯ ಮಾತ್ರವಲ್ಲದೆ ಕಳೆದ 14 ವರ್ಷಗಳಿಂದ ಅಸೋಸಿಯೇಷನ್ ವ್ಯಾಪ್ತಿಯ 16 ಹಳ್ಳಿಗಳ ಎಲ್ಲಾ ಸಮುದಾಯಗಳ ನಿರಂತರ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಬರಲಾಗಿದೆ. ಸಮಾಜದ ಹಿಂದುಳಿದ, ಅಶಕ್ತ ಬಂಧುಗಳಿಗೆ ಸ್ಥಿರ ಮತ್ತು ಸುಸ್ಥಿರ ಜೀವನ ರೂಪಿಸುವ ಉದಾತ್ತ ಉದ್ದೇಶದಿಂದ ಈ ಭವನ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮುಂಬರುವ ಜುಲೈ 5ರಂದು ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನೆರವೇರಲಿದೆ. ಅಂದು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೆ, ಕೇವಲ ಸಮಾಜಮುಖಿ ಕಾರ್ಯಗಳಾದ ಶಿಲಾನ್ಯಾಸ, ಸಭಾ ಕಾರ್ಯಕ್ರಮ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಶೈಕ್ಷಣಿಕ ಧನಸಹಾಯ ನೀಡುವ ಕಾರ್ಯಕ್ರಮಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಬಜ್ಪೆ ವಲಯದ 16 ಹಳ್ಳಿಗಳ ಸಾರ್ವಜನಿಕರು ಸೇರಿದಂತೆ ಸುಮಾರು 3,000ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

ಜುಲೈ 5ರಂದು ನಡೆಯಲಿರುವ ಈ ಸಭಾ ಕಾರ್ಯಕ್ರಮದಲ್ಲಿ ಎಂಆರ್‌ಜಿ ಗ್ರೂಪ್‌ನ ಸ್ಥಾಪಕ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಶಬರಿ ಇಂಡಸ್ಟ್ರಿ ಕ್ಯಾಟರಿಂಗ್ ಸರ್ವಿಸಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ಟಿ. ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದು, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿ.ಕೆ. ಗ್ರೂಪ್ ಆಫ್ ಕಂಪನೀಸ್‌ನ ಸಿಎಂಡಿ ಕರುಣಾಕರ್ ಶೆಟ್ಟಿ ಮುಂಡ್ಕೂರು ಅವರು 'ಮೀಡಿಯಾ ಅಕ್ಷಯ' ಬಿಡುಗಡೆ ಮಾಡಲಿದ್ದು, ಪೂನಾ ಬಂಟ್ಸ್ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇಂಜಾರ ಕೊಠಾರಿ ಅವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ ಮುಂಬೈನ ಹೇರಂಬಾ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕಲ್ಯಾಣ್ ಸಂತೋಷ್ ಶೆಟ್ಟಿ, ಭುವನೇಶ್ವರಿ ಶಿಪ್ಪಿಂಗ್ ಸರ್ವಿಸಸ್‌ನ ಸ್ಥಾಪಕ ಅಧ್ಯಕ್ಷ ಕುಸುಮೋದರ್ ಡಿ. ಶೆಟ್ಟಿ ಮತ್ತು ಬರೋಡಾದ ಶಶಿ ಕ್ಯಾಟರಿಂಗ್ ಸರ್ವಿಸಸ್‌ನ ವ್ಯವಸ್ಥಾಪಕ ನಿರ್ದೇಶಕ ಶಶಿಧರ್ ಶೆಟ್ಟಿ ಬರೋಡಾ ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ವೈ. ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬಜಪೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಪೂಜಾರಿ, ಉಪಾಧ್ಯಕ್ಷೆ ಶರ್ಮಿಳಾ ಶೆಟ್ಟಿ ಸೇರಿದಂತೆ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬೆಲ್ಶೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಕರ್ಮಾರು ಪಡುಮನೆ ವೇಣುಗೋಪಾಲ್ ಶೆಟ್ಟಿ, ಉಪಾಧ್ಯಕ್ಷರಾದ ಕುಸುಮಾಕರ್ ಶೆಟ್ಟಿ, ಡಾ. ಪ್ರಸಾದ್ ರೈ, ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಸುಕೇಶ್ ಶೆಟ್ಟಿ, ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಪ್ರೀತಿ ಹರೀಶ್ ಶೆಟ್ಟಿ ಹಾಗೂ ಯುವ ಘಟಕದ ಅಧ್ಯಕ್ಷ ದೇವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ