image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜವಾಬ್ದಾರಿಯುತ ಯುವ ಸಮೂಹವೇ ರಾಷ್ಟ್ರದ ಭವಿಷ್ಯ: ವಿವೇಕ್ ಆಳ್ವ

ಜವಾಬ್ದಾರಿಯುತ ಯುವ ಸಮೂಹವೇ ರಾಷ್ಟ್ರದ ಭವಿಷ್ಯ: ವಿವೇಕ್ ಆಳ್ವ

ಮೂಡುಬಿದಿರೆ: ಜವಾಬ್ದಾರಿಯನ್ನು ಸ್ವೀಕರಿಸಿದಾಗ ಮಾತ್ರ ಬದುಕಿನಲ್ಲಿ ಉತ್ತಮ ಸ್ಥಾನಮಾನ ಮತ್ತು ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವ ಹಾಗೂ ಸನ್ಮನಸ್ಸನ್ನು ರೂಪಿಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಮುಖ ಗುರಿಯಾಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಕೃಷಿಸಿರಿ ಸಭಾಂಗಣದಲ್ಲಿ ಆಳ್ವಾಸ್ ಸ್ವಾಯತ್ತಾ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ 'ಅಂಕುರ' ಇಂಡಕ್ಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

೧೯೯೮ರಲ್ಲಿ ಕೇವಲ ೨೫ ವಿದ್ಯಾರ್ಥಿಗಳು, ಎರಡು ವಿಭಾಗ ಹಾಗೂ ೧೧ ಅಧ್ಯಾಪಕರೊಂದಿಗೆ ಆರಂಭವಾದ ಆಳ್ವಾಸ್ ಸಂಸ್ಥೆ, ಇಂದು ೫೪ ಶೈಕ್ಷಣಿಕ ಕಾರ್ಯಕ್ರಮಗಳು, ೧೨೨ ತರಗತಿ ಕೊಠಡಿಗಳು, ೧೮೮ ಶಿಕ್ಷಕರು ಹಾಗೂ ೩,೧೯೧ ವಿದ್ಯಾರ್ಥಿಗಳನ್ನು ಒಳಗೊಂಡ ಬೃಹತ್ ಸಂಸ್ಥೆಯಾಗಿ ಬೆಳೆದಿದೆ. ಈ ಸಾಧನೆಯ ಹಿಂದಿನ ನಿಜವಾದ ಶಕ್ತಿ ಮತ್ತು ಬ್ರ್ಯಾಂಡ್ ಇಲ್ಲಿನ ವಿದ್ಯಾರ್ಥಿಗಳೇ ಆಗಿದ್ದಾರೆ. ಮಕ್ಕಳು ತಮ್ಮ ಪಾಲಕರ ತ್ಯಾಗ ಮತ್ತು ನಿರೀಕ್ಷೆಗಳನ್ನು ಅರ್ಥಮಾಡಿಕೊಂಡು ಶಿಕ್ಷಣದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ತಂತ್ರಜ್ಞಾನದ ಇಂದಿನ ಯುಗದಲ್ಲಿ ಕೃತಕ ಬುದ್ಧಿಮತ್ತೆಯು ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲ, ಬದಲಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಹೀಗಾಗಿ ತಂತ್ರಜ್ಞಾನದ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಯುವಜನತೆ ಶ್ರೇಷ್ಠತೆ, ಉತ್ತಮ ಪರಿಸರ ನಿರ್ಮಾಣ ಮತ್ತು ಸಾಮಾಜಿಕ ಅರಿವಿನತ್ತ ಸಾಗಿದಾಗ ಮಾತ್ರ ಅರ್ಥಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ನುಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್ ಮಾತನಾಡಿ, ಒಂದು ರಾಷ್ಟ್ರದ ಭವಿಷ್ಯ ರೂಪುಗೊಳ್ಳುವುದು ತರಗತಿ ಕೊಠಡಿಗಳಲ್ಲಿಯೇ ಆಗಿರುವುದರಿಂದ ತರಗತಿಯನ್ನು ಜಗತ್ತಿನ ಅತಿದೊಡ್ಡ ಪವರ್‌ಹೌಸ್ ಎಂದು ಪರಿಗಣಿಸಲಾಗಿದೆ. ವಿದ್ಯಾರ್ಥಿಗಳ ಬೆಳವಣಿಗೆಗೆ ಸುರಕ್ಷಿತ ಹಾಗೂ ಪ್ರೇರಣಾತ್ಮಕ ವಾತಾವರಣ ಅತ್ಯಗತ್ಯವಾಗಿದ್ದು, ಸದಾ ಸಕಾರಾತ್ಮಕ ಚಿಂತನೆ ಹೊಂದಿದವರೊಂದಿಗೆ ಬೆರೆಯಬೇಕು ಮತ್ತು ನಕಾರಾತ್ಮಕ ಮನೋಭಾವದ ವ್ಯಕ್ತಿಗಳಿಂದ ದೂರವಿರಬೇಕು ಎಂದರು. ಪರೀಕ್ಷಾಂಗ ಕುಲಸಚಿವ ಡಾ. ಎನ್.ಪಿ. ನಾರಾಯಣ ಶೆಟ್ಟಿ ಅವರು ಪರೀಕ್ಷಾ ವಿಭಾಗದ ಕಾರ್ಯವೈಖರಿ, ನಿಯಮಗಳು ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳ ಕುರಿತು ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು. ಶೈಕ್ಷಣಿಕ ಬೆಳವಣಿಗೆಯಲ್ಲಿ ಕಾಲೇಜು ಮತ್ತು ಪೋಷಕರ ನಡುವಿನ ನಿರಂತರ ಸಂಪರ್ಕ ಅಗತ್ಯ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಶೈಕ್ಷಣಿಕ ಕುಲಸಚಿವ ಡಾ. ಟಿ.ಕೆ. ರವೀಂದ್ರನ್ ಉಪಸ್ಥಿತರಿದ್ದರು. ಡಾ. ಯೋಗಿಶ್ ಕೈರೋಡಿ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಿರ್ವಹಿಸಿದರು.

Category
ಕರಾವಳಿ ತರಂಗಿಣಿ