ಮಂಗಳೂರು: ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾರವರ ಮಂಗಳೂರು ಮಹಾನಗರ ಪಾಲಿಕೆಯ ತಮ್ಮ ಶಾಸಕರ ಕಛೇರಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಹಾಯವಾಣಿ ಕೇಂದ್ರವನ್ನು (SIR) ದಿನಾಂಕ 15-06-2026 ರಂದು ಪ್ರಾರಂಭಿಸಲಾಯಿತು. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ತಪ್ಪಿಸಿಕೊಳ್ಳದಂತೆ ತಡೆಯಲು ಮತ್ತು ಸರಿಯಾದ ದಾಖಲೆಗಳನ್ನು ಸರಿಯಾದ ಸಮಯದಲ್ಲಿ ನೀಡಿ ಖಾತ್ರಿ ಪಡಿಸಿಕೊಳ್ಳಲು ಈ ಸಹಾಯವಾಣಿ ಕೇಂದ್ರವು ಸಹಕಾರಿಯಾಗಲಿದೆ. ಸಾರ್ವಜನಿಕರು ಮೊಬೈಲ್ ಸಂಖ್ಯೆ: 8217865120 ಅನ್ನು ಸಂಪರ್ಕಿಸಿದಲ್ಲಿ ಸಂಪೂರ್ಣ ಮಾಹಿತಿಯೊಂದಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸಲು ಸಹಾಯ ಮಾಡಲಾಗುವುದು ಎಂದು ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಅವರು, ಅನೇಕ ಕಡೆಗಳಲ್ಲಿ ಸಾರ್ವಜನಿಕರಿಗೆ 'SIR' ಬಗ್ಗೆ ಮಾಹಿತಿಯ ಕೊರತೆ ಇದ್ದು, ಈ ರೀತಿಯ ಸಹಾಯ ಕೇಂದ್ರದ ಮೂಲಕ ಮಾಹಿತಿ ನೀಡಿದಲ್ಲಿ ಜನರ ಗೊಂದಲಗಳು ದೂರವಾಗಲಿವೆ ಎಂದರು. ಮಹತ್ತರವಾದ ಈ ಸಹಾಯಕೇಂದ್ರದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು. ಈ ಮಹತ್ವದ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಭಾಸ್ಕರ್ ಮೊಯಿಲಿ, ನವೀನ್ ಡಿʼಸೋಜಾ, ಪದ್ಮನಾಭ ಪಣಿಕ್ಕರ್, ಪ್ರಕಾಶ್ ಬಿ ಸಾಲ್ಯಾನ್, ಸತೀಶ್ ಪೆಂಗಲ್, ಅಬ್ದುಲ್ ಸಲೀಂ, ಚೇತನ್ ಕುಮಾರ್, ಮನಿಷ್ ಬೋಳಾರ್, ಬಶೀರ್ ಅಹಮಮದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.