image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇಚ್ಛಾಶಕ್ತಿ ಮತ್ತು ಆತ್ಮಬಲದಿಂದ ಮಾತ್ರ ಸಶಕ್ತ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ: ಸ್ವಾಮಿ ಮಂಗಳನಾಥಾನಂದಜಿ

ಇಚ್ಛಾಶಕ್ತಿ ಮತ್ತು ಆತ್ಮಬಲದಿಂದ ಮಾತ್ರ ಸಶಕ್ತ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ: ಸ್ವಾಮಿ ಮಂಗಳನಾಥಾನಂದಜಿ

ಪುತ್ತೂರು : ಮಂಗಳೂರು ರಾಮಕೃಷ್ಣ ಮಿಷನ್ ವತಿಯಿಂದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ "ವಿವೇಕ ಜಾಗೃತಿ" ಸರಣಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಬಳ್ಳಾರಿಯ ರಾಮಕೃಷ್ಣ ಮಿಷನ್‌ನ ಮುಖ್ಯಸ್ಥರಾದ ಸ್ವಾಮಿ ಮಂಗಳನಾಥಾನಂದಜಿ ಅವರು ಮುಖ್ಯ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯೂ ತನ್ನಲ್ಲಿ ಅಪಾರವಾದ ಇಚ್ಛಾಶಕ್ತಿಯನ್ನು ಸಕಾರಾತ್ಮಕವಾಗಿ ಬೆಳೆಸಿಕೊಂಡಾಗ ಮಾತ್ರ ಸವಾರ್ಂಗೀಣ ಬೆಳವಣಿಗೆ ಹಾಗೂ ಪ್ರಬಲ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.

"ಶಕ್ತಿ, ಶ್ರದ್ದೆ ಮತ್ತು ಸಾಧನೆ ಯುವಕರಿಗೆ ಸ್ವಾಮಿ ವಿವೇಕಾನಂದರ ಸಂದೇಶ" ಎಂಬ ವಿಷಯದ ಕುರಿತು ಪ್ರೇರಣಾದಾಯಿ ಉಪನ್ಯಾಸ ನೀಡಿದ ಪೂಜ್ಯರು, ಇಚ್ಛಾಶಕ್ತಿ ಎನ್ನುವುದು ವ್ಯಕ್ತಿಯು ತನ್ನ ಗುರಿಯನ್ನು ಸಾಧಿಸಲು ಹೊಂದಿರುವ ದೃಢಸಂಕಲ್ಪ, ಮನೋಬಲ ಮತ್ತು ನಿರಂತರ ಪ್ರಯತ್ನ ಮಾಡುವ ಶಕ್ತಿಯಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಇಚ್ಛಾಶಕ್ತಿಯನ್ನು ಪ್ರಬಲಗೊಳಿಸಿಕೊಂಡರೆ ಗುರಿ ಸಾಧನೆ ಸುಲಭವಾಗುತ್ತದೆ. ವಿದ್ಯಾರ್ಥಿಗಳು ತಾವು ನೋಡುವ, ಕೇಳುವ ಹಾಗೂ ಮಾಡುವ ಸಂಗತಿಗಳು ಸದಾ ಉನ್ನತ ಮಟ್ಟದ್ದಾಗಿರಬೇಕು; ಒಂದು ವೇಳೆ ಅವು ಕಳಪೆ ಮಟ್ಟದ್ದಾಗಿದ್ದರೆ ಇಚ್ಛಾಶಕ್ತಿ ಕ್ಷೀಣಿಸುತ್ತದೆ. ಆದುದರಿಂದ, ಸ್ವಾಮಿ ವಿವೇಕಾನಂದರ ಮೌಲ್ಯ, ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜೀವನದಲ್ಲಿ ಮೈಗೂಡಿಸಿಕೊಂಡು ಅದ್ಭುತವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಯುವಜನತೆಗೆ ಕರೆ ನೀಡಿದರು.

ಈ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ ಪಿ. ಅವರು ವಹಿಸಿದ್ದರು. ವೇದಿಕೆಯಲ್ಲಿ ಭಾರತೀಯ ಸೇನೆಯ ನಿವೃತ್ತ ಯೋಧ ಹಾಗೂ ಮಂಗಳೂರು ರಾಮಕೃಷ್ಣ ಮಿಷನ್‌ನ ಹಿರಿಯ ಸ್ವಯಂಸೇವಕ ಬೆಳ್ಳಾಲ ಗೋಪಿನಾಥ ರಾವ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಿಷನ್‌ನ ಮೌಲ್ಯ ಶಿಕ್ಷಣ ಕಾರ್ಯಕ್ರಮಗಳ ಸಂಯೋಜಕ ಸಜೀತ್, ಸ್ವಯಂಸೇವಕ ಸನತ್, ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ ಎಂ. ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಪ್ರಾಂಶುಪಾಲ ದೇವಿಚರಣ್ ರೈ ಎಂ. ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರೆ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು. ಕಾಲೇಜಿನ ಉಪನ್ಯಾಸಕಿ ಡಾ. ಸ್ನೇಹ ಬಿ. ಎಸ್. ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.

Category
ಕರಾವಳಿ ತರಂಗಿಣಿ