ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 26ನೇ ದೇರೆಬೈಲ್ ನೈರುತ್ಯ ವಾರ್ಡಿನ ಚಿಲಿಂಬಿ ಶ್ರೀ ಮಲರಾಯ ದೈವಸ್ಥಾನದ ದ್ವಾರದಿಂದ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. 50 ಲಕ್ಷ ರೂಪಾಯಿಗಳ ವಿಶೇಷ ಅನುದಾನದಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಸ್ಥಳೀಯ ನಿವಾಸಿಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ನಡೆಯುವ ಅವಧಿಯಲ್ಲಿ ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿನ ಅಡಚಣೆಯಾಗಬಹುದು, ಅದಕ್ಕೆ ಸ್ಥಳೀಯರು ಸಹಕರಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಗುತ್ತಿಗೆದಾರರು ಕಾಮಗಾರಿಯಲ್ಲಿ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ, ನಿಗದಿತ ಸಮಯದೊಳಗೆ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯ ಗಣೇಶ್ ಕುಲಾಲ್, ಸೋಮಶೇಖರ್ ಚಿಲಿಂಬಿ, ರಾಕೇಶ್ ಸಾಲ್ಯಾನ್, ಸುರೇಶ್ ರಾವ್, ಅರುಣ್ ಉರ್ವ, ಪ್ರವೀಣ್ ನಿಡ್ಡೆಲ್, ಗಣೇಶ್ ಭಟ್, ಸುರೇಶ್ ಬಾಳಿಗ, ಶ್ರೀಪಾದ್ ರಾಯತ್, ಚನ್ನಕೇಶವ, ರಜತ್ ಚಿಲಿಂಬಿ, ರಾಜ್ ಕುಮಾರ್ ಶೆಟ್ಟಿ, ಮನೋಜ್ ಕುಮಾರ್ ಶೆಟ್ಟಿ, ರಜತ್ ಕುಲಾಲ್, ದೀಪಕ್ ಶೆಟ್ಟಿ ಸೇರಿದಂತೆ ವಾರ್ಡಿನ ಪ್ರಮುಖರು, ಸ್ಥಳೀಯ ನಿವಾಸಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.