image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಾಣಿಲ ಶ್ರೀಧಾಮದಲ್ಲಿ 48 ದಿನಗಳ ವರಮಹಾಲಕ್ಷ್ಮೀ ವ್ರತಾಚರಣೆ: ಪೂರ್ವಭಾವಿ ಸಭೆ ಸಂಪನ್ನ

ಮಾಣಿಲ ಶ್ರೀಧಾಮದಲ್ಲಿ 48 ದಿನಗಳ ವರಮಹಾಲಕ್ಷ್ಮೀ ವ್ರತಾಚರಣೆ: ಪೂರ್ವಭಾವಿ ಸಭೆ ಸಂಪನ್ನ

ಮಾಣಿಲ: ಆರಾಧನೆ ಮತ್ತು ಆಧ್ಯಾತ್ಮಿಕ ಚಿಂತನೆಗಳಿಂದ ಮಾತ್ರ ಮನುಷ್ಯನ ಆತ್ಮೋನ್ನತಿ ಸಾಧ್ಯ. ಭಜನೆ ಹಾಗೂ ಧ್ಯಾನದಂತಹ ಕ್ರಿಯೆಗಳಿಂದ ಮನಸ್ಸು ಪ್ರಫುಲ್ಲಗೊಂಡು, ಜೀವನದಲ್ಲಿ ನೆಮ್ಮದಿ ಪ್ರಾಪ್ತವಾಗುತ್ತದೆ ಎಂದು ಮಾಣಿಲ ಶ್ರೀಧಾಮ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅಭಿಪ್ರಾಯಪಟ್ಟರು.

​ಮಾಣಿಲ ಶ್ರೀಧಾಮದಲ್ಲಿ ನಡೆಯಲಿರುವ 27ನೇ ವರ್ಷದ 48 ದಿನಗಳ ವರಮಹಾಲಕ್ಷ್ಮೀ ವ್ರತಾಚರಣೆಯ ಅಂಗವಾಗಿ ಜೂನ್ 14ರ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಭಕ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶ ನೀಡಿದರು. ಇಂದಿನ ದಿನಗಳಲ್ಲಿ ಮನುಷ್ಯ ಮಾದಕ ವಸ್ತುಗಳ ಸೇವನೆಯಷ್ಟೇ ಅಲ್ಲದೆ, ವಿವಿಧ ಕಾರಣಗಳಿಂದ ಹಾದಿ ತಪ್ಪುತ್ತಿದ್ದು, ಮತಿಭ್ರಾಂತರಂತೆ ವರ್ತಿಸುತ್ತಿದ್ದಾನೆ. ಈ ಪರಿಸ್ಥಿತಿ ಬದಲಾಗಿ ಸಮಾಜ ಸುಧಾರಣೆಯಾಗಬೇಕಾದರೆ ಆಧ್ಯಾತ್ಮವೇ ಏಕೈಕ ಪರಿಹಾರವಾಗಿದೆ. ದೇವಸ್ಥಾನದ ಮತ್ತು ನಮ್ಮ ದೇಹದ ವ್ಯವಸ್ಥೆ ಸಮನ್ವಯಗೊಂಡಾಗ, ಯಜ್ಞ ಮತ್ತು ಸಂಕೀರ್ತನೆಗಳಿಂದ ಭಕ್ತಿಯ ಝೇಂಕಾರ ಮೊಳಗಿದಾಗ ಮಾತ್ರ ಒಳಿತಾಗಲು ಸಾಧ್ಯ. ಭಕ್ತರ ಹೃದಯದಲ್ಲಿ ನೆಲೆನಿಂತ ಮಹಾಲಕ್ಷ್ಮೀಯ ಪೂಜೆಯು ಮನುಷ್ಯನ ದೈನಂದಿನ ಒತ್ತಡಗಳನ್ನು ನಿವಾರಿಸಿ ಮನಸ್ಸಿಗೆ ಶಾಂತಿ ನೀಡುತ್ತದೆ ಎಂದು ಶ್ರೀಗಳು ವಿವರಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ಈ ವೇಳೆ ವಿಶೇಷ ಸಮಿತಿಯನ್ನು ರಚಿಸಲಾಯಿತು. ಕಾರ್ಯಕ್ರಮದಲ್ಲಿ ಕೆಯ್ಯೂರು ನಾರಾಯಣ ಭಟ್, ಶ್ರೀಧರ ಬಾಳೆಕಲ್ಲು, ದೇವಪ್ಪ ಕುಲಾಲ್, ವನಿತಾ ಶೆಟ್ಟಿ, ರೇವತಿ ಪೆರ್ನೆ, ಕಲ್ಲಟೆ ವೆಂಕಟ್ರಮಣ ಭಟ್, ಹರೀಶ್ ಬೊಟ್ಟಾಡಿ, ಮುರಳೀ ಮಧೂರು, ನವೀನ್ ಪುತ್ತಿಗೆ, ರಮ್ಯಾ ಎಸ್., ಹೇಮಲತಾ ಶರ್ಮ, ಮಚ್ಚೇಂದ್ರ ಸಾಲ್ಯಾನ್, ಸತೀಶ್ ಪುಣ್ಚಿತ್ತಾಯ ಪೆರ್ಲ, ರಮೇಶ್, ಬಾಲಕೃಷ್ಣ ಶೆಟ್ಟಿ, ವೇಣುಗೋಪಾಲ ಶೇಣಿ, ನವೀನ್ ಕುಲಾಲ್ ಹಾಗೂ ಸುರೇಶ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶ್ರೇಯಾ ಮತ್ತು ಶಾರ್ವಿ ಪ್ರಾರ್ಥನೆ ಗೈದರು. ಟ್ರಸ್ಟಿ ದೇವಪ್ಪ ಕುಲಾಲ್ ಸ್ವಾಗತಿಸಿ, ಮಚ್ಚೇಂದ್ರ ಸಾಲ್ಯಾನ್ ವಂದಿಸಿದರು. ಎಚ್. ಕೆ. ನಯನಾಡು ಕಾರ್ಯಕ್ರಮವನ್ನು ನಿರೂಪಿಸಿದರು.

Category
ಕರಾವಳಿ ತರಂಗಿಣಿ