ಸುಬ್ರಹ್ಮಣ್ಯ: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಭಕ್ತರ ಮಹಾಪೂರವೇ ಹರಿದುಬಂದಿದೆ. ಜೂನ್ ತಿಂಗಳು ಮಳೆಗಾಲದ ಆರಂಭದ ಸಮಯವಾಗಿದ್ದರೂ, ಈ ವರ್ಷ ಮಳೆಯ ಪ್ರಮಾಣ ತೀರಾ ಕಡಿಮೆ ಇರುವುದು ಹಾಗೂ ಇಂದು ರವಿವಾರದ ರಜೆಯ ಜೊತೆಗೆ ಮಿಥುನ ಮಾಸದ ಆರಂಭವಾಗಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದಾರೆ.
ಶನಿವಾರ ರಾತ್ರಿಯಿಂದಲೇ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಭಾಗಗಳಿಂದ ಭಕ್ತಾದಿಗಳು ಸುಬ್ರಹ್ಮಣ್ಯಕ್ಕೆ ದೌಡಾಯಿಸಿದ್ದಾರೆ. ಭಕ್ತರ ವಾಹನಗಳ ದಟ್ಟಣೆಯಿಂದಾಗಿ ಪಟ್ಟಣದ ಎಲ್ಲಾ ಪಾರ್ಕಿಂಗ್ ಪ್ರದೇಶಗಳು ಭರ್ತಿಯಾಗಿದ್ದು, ವಾಹನ ನಿಲ್ಲಿಸಲು ಜಾಗ ಹುಡುಕಲು ಭಕ್ತರು ಪರದಾಡುವಂತಾಯಿತು. ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನದ ವಸತಿಗೃಹಗಳು ವಾರದ ಹಿಂದೆಯೇ ಸಂಪೂರ್ಣವಾಗಿ ಬುಕ್ ಆಗಿದ್ದರೆ, ಖಾಸಗಿ ವಸತಿಗೃಹಗಳೂ ಸಹ ಶನಿವಾರದಿಂದಲೇ ಭಕ್ತರಿಂದ ತುಂಬಿ ತುಳುಕುತ್ತಿವೆ.
ಮಳೆಯ ಸಿಂಚನ ಇಲ್ಲದ ಕಾರಣ, ದೇವರ ದರ್ಶನಕ್ಕಾಗಿ ರಥಬೀದಿಯಲ್ಲಿ ಭಕ್ತರು ಜಮಾಯಿಸಿದ್ದು, ಯಾವುದೇ ಅಡಚಣೆಯಿಲ್ಲದೆ ಸರತಿ ಸಾಲಿನಲ್ಲಿ ದರ್ಶನಕ್ಕೆ ತೆರಳಿದರು. ಭಕ್ತರ ಸುಗಮ ದರ್ಶನ, ತೀರ್ಥ ಪ್ರಸಾದ ವಿತರಣೆ ಮತ್ತು ಭೋಜನ ವ್ಯವಸ್ಥೆಗೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಸೂಕ್ತ ಸಿದ್ಧತೆಗಳನ್ನು ಮಾಡಿದ್ದರು. ವಿಶೇಷವಾಗಿ ಆದಿ ಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಭಕ್ತರಿಗೆ ಬಫೆ ವ್ಯವಸ್ಥೆಯ ಭೋಜನದ ಸೌಲಭ್ಯವನ್ನು ಕಲ್ಪಿಸಲಾಗಿತ್ತು.