image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಕೀಲಿ ವೃತ್ತಿಗೆ ಆಕಾಶವಲ್ಲ, ಬಾಹ್ಯಾಕಾಶವೇ ಮಿತಿ : ಜಗದೀಶ್ ಶೇಣವ

ವಕೀಲಿ ವೃತ್ತಿಗೆ ಆಕಾಶವಲ್ಲ, ಬಾಹ್ಯಾಕಾಶವೇ ಮಿತಿ : ಜಗದೀಶ್ ಶೇಣವ

ಮೂಡುಬಿದಿರೆ : ಆಳ್ವಾಸ್ ಕಾನೂನು ಕಾಲೇಜಿನ ವತಿಯಿಂದ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ಶೇಣವ ಹಾಗೂ ಮೂಡುಬಿದಿರೆ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಶರತ್ ಶೆಟ್ಟಿ ಅವರಿಗೆ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಶನಿವಾರ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್ ಶೇಣವ ಅವರು, ವಕೀಲ ವೃತ್ತಿಯಲ್ಲಿ ದೊರೆಯುವ ಹೆಸರು, ಗೌರವ ಮತ್ತು ಆರ್ಥಿಕ ಯಶಸ್ಸು ಬೇರೆ ಯಾವ ಕ್ಷೇತ್ರಗಳಲ್ಲೂ ಸಿಗಲಾರದು. ಇಲ್ಲಿ ಆಕಾಶವಲ್ಲ, ಬಾಹ್ಯಾಕಾಶವೇ ನಮ್ಮ ಮಿತಿ ಎಂದು ಅಭಿಪ್ರಾಯಪಟ್ಟರು. ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಂಡ ಅವರು, ವೈದ್ಯನಾಗುವ ಕನಸು ಕಂಡು ಪಿಸಿಎಂಬಿ ವಿಭಾಗದಲ್ಲಿ ಅನುತ್ತೀರ್ಣನಾದ ಬಳಿಕ ಕಲಾ ವಿಭಾಗಕ್ಕೆ ಸೇರ್ಪಡೆಗೊಂಡೆ. ಜೀವನದ ಸೋಲುಗಳೇ ನನ್ನ ಯಶಸ್ಸಿನ ದಾರಿಯನ್ನು ರೂಪಿಸಿದವು ಎಂದರು.

ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ವಕೀಲರಾಗಿದ್ದರು ಎಂಬುದನ್ನು ಸ್ಮರಿಸಿದ ಅವರು, ವಕೀಲರು ಕೇವಲ ನ್ಯಾಯಾಲಯಕ್ಕೆ ಸೀಮಿತವಾಗದೆ ಉತ್ತಮ ನಾಯಕರು, ನೀತಿ ನಿರೂಪಕರು ಹಾಗೂ ಕಾರ್ಪೊರೇಟ್ ವಲಯದ ತಜ್ಞರಾಗಿಯೂ ಬೆಳೆಯಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಕೀಲ ವೃತ್ತಿಗೆ ವಿಶೇಷ ಗೌರವವಿದ್ದು, ಕೇವಲ ಹಕ್ಕುಗಳ ಬಗ್ಗೆ ಮಾತ್ರ ಮಾತನಾಡದೆ ಕರ್ತವ್ಯಗಳ ಬಗ್ಗೆಯೂ ಸಮಾನ ಗಮನ ಹರಿಸಬೇಕು ಎಂದು ಅವರು ಕರೆ ನೀಡಿದರು.

ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಶರತ್ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಕಾನೂನಿನ ಅನುಷ್ಠಾನದಲ್ಲಿ ವಕೀಲರು ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ತಾವು 9ನೇ ತರಗತಿಯಲ್ಲಿ ರವಿಚಂದ್ರನ್ ಅಭಿನಯದ 'ಯುದ್ಧಕಾಂಡ' ಚಲನಚಿತ್ರ ವೀಕ್ಷಿಸಿದ ಬಳಿಕ ವಕೀಲನಾಗುವ ಪ್ರೇರಣೆ ಪಡೆದಿದ್ದಾಗಿ ಸ್ಮರಿಸಿದರು. ವೃತ್ತಿಜೀವನದ ಆರಂಭದಲ್ಲಿ ಕೋಟ್ ಖರೀದಿಸಲು ಗೆಳೆಯನಿಂದ 1,500 ರೂಪಾಯಿ ಸಾಲ ಪಡೆದಿದ್ದ ದಿನಗಳನ್ನು ನೆನಪಿಸಿಕೊಂಡ ಅವರು, ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನದಿಂದ ಇಂದು ಬಾರ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಸಾಧ್ಯವಾಗಿದೆ. ಯುವಕರು ಸವಾಲುಗಳಿಗೆ ಹೆದರದೆ ತಮ್ಮ ಗುರಿಯತ್ತ ನಿರಂತರವಾಗಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕಾನೂನು ಚಿಂತನೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅಗತ್ಯವಾಗಿದೆ. ವಿದ್ಯಾರ್ಥಿಗಳು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ ಶಿಸ್ತು, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು. ಹಕ್ಕುಗಳಿಗಿಂತ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಅಗತ್ಯ ಎಂದ ಅವರು, ಜೀವನದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು, ಆದರೆ ತತ್ವಗಳಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ನೂತನವಾಗಿ ಅಧಿಕಾರ ಸ್ವೀಕಾರ ಮಾಡಿದ ಜಗದೀಶ್ ಶೇಣವ ಮತ್ತು ಶರತ್ ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮೊಹಮ್ಮದ್ ಸಫ್ವಾನ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಹಿರಿಯ ವಕೀಲರಾದ ಬಾಹುಬಲಿ ಪ್ರಸಾದ್, ಶ್ವೇತಾ ಜೈನ್, ಮನೋಜ್ ಶೆಣೈ, ಜಯಪ್ರಕಾಶ್ ಭಂಡಾರಿ ಹಾಗೂ ಆಳ್ವಾಸ್ ಕಾನೂನು ಕಾಲೇಜಿನ ಪ್ರಾಚಾರ್ಯ ಪ್ರೊ. ಮಹಾಂತೇಶ್ ಜಿ. ಎಸ್. ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ