ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ರಸ್ತೆ ಸಂಪರ್ಕವನ್ನು ಬಲಪಡಿಸಲು ಕೇಂದ್ರ ಸರ್ಕಾರವು ಬೃಹತ್ ಕೊಡುಗೆ ನೀಡಿದೆ. ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಯೋಜನೆಯಡಿ ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು 57 ಕೋಟಿ ರೂಪಾಯಿಗಳ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ. ಈ ಯೋಜನೆಯ ಮೂಲಕ ಜಿಲ್ಲೆಯಾದ್ಯಂತ ಒಟ್ಟು 82.94 ಕಿಲೋ ಮೀಟರ್ ಉದ್ದದ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಮಂಗಳೂರು, ಉಳ್ಳಾಲ, ಮೂಡುಬಿದ್ರೆ, ಪುತ್ತೂರು, ಬಂಟ್ವಾಳ ಸೇರಿದಂತೆ ಎಲ್ಲಾ ತಾಲೂಕುಗಳ ಪ್ರಮುಖ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಸುಧಾರಣೆಗೊಳ್ಳಲಿವೆ.
ಮಂಜೂರಾಗಿರುವ ಅನುದಾನದಲ್ಲಿ ವಿವಿಧ ತಾಲೂಕುಗಳ ರಸ್ತೆಗಳ ಅಭಿವೃದ್ಧಿಗೆ ಹಣ ನಿಗದಿಪಡಿಸಲಾಗಿದೆ. ಉಳ್ಳಾಲ ತಾಲೂಕಿನ ಕಟಪಾಡಿ-ಅಬ್ಬಕ್ಕ ಸರ್ಕಲ್ ರಸ್ತೆಯ ಚಂಬುಗುಡ್ಡೆಯಿಂದ ಮಚಲಿ ಹೋಟೆಲ್ ಹಾಗೂ ಇನ್ಫೋಸಿಸ್ ಸಮೀಪದ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ. ಮತ್ತು ಸಜಿಪನಾಡು-ಬೋಳ್ಯಾರ್ ರಸ್ತೆಯ ಆಯ್ದ ಭಾಗಗಳ ಸುಧಾರಣೆಗೆ 2 ಕೋಟಿ ರೂ. ಮೀಸಲಿಡಲಾಗಿದೆ. ಮೂಡುಬಿದಿರೆಯ ಹೊಸಂಗಡಿ ಪುಚ್ಚಮೊಗರು ಸೇತುವೆಯಿಂದ ಬೆಳ್ತಂಗಡಿ-ಬಂಟ್ವಾಳ ಕ್ರಾಸ್ ವರೆಗಿನ ರಾಜ್ಯ ಹೆದ್ದಾರಿಗೆ 6 ಕೋಟಿ ರೂ., ಸುರತ್ಕಲ್-ಕಬಕ ರಸ್ತೆಯ ಬಜಪೆಯಿಂದ ಕೈಕಂಬ ಹಾಗೂ ಪೊಳಲಿ ದ್ವಾರದಿಂದ ಅಡ್ಡೂರು ಸೇತುವೆಯವರೆಗಿನ ರಸ್ತೆ ಅಭಿವೃದ್ಧಿಗೆ 6 ಕೋಟಿ ರೂ. ಹಾಗೂ ಪುಂಜಾಲಕಟ್ಟೆಯ ಮೂರ್ಜೆ ಕುದ್ಕೋಲಿ ರಸ್ತೆಯ ಪಾಂಗಲ್ಪಾಡಿಯಿಂದ ಕುದ್ಕೋಲಿ ವರೆಗಿನ ರಸ್ತೆಗೆ 6 ಕೋಟಿ ರೂ. ಅನುದಾನ ದೊರೆತಿದೆ.
ಇದರೊಂದಿಗೆ ಉಪ್ಪಿನಂಗಡಿ-ಪೆರಿಯಡ್ಕ-ಕೊಯ್ಲಾ ಸೆಕ್ಷನ್‌ಗೆ 2 ಕೋಟಿ ರೂ., ಹಂತ್ಯಾರು-ಬೆಟ್ಟಂಪಾಡಿ ರಸ್ತೆಗೆ 3 ಕೋಟಿ ರೂ. ಹಾಗೂ ಕೆಪುಲು-ಪಾದಿಲ್ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ. ವ್ಯಯಿಸಲಾಗುವುದು. ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಆಯ್ದ ಭಾಗಗಳ ಅಭಿವೃದ್ಧಿಗೆ 6 ಕೋಟಿ ರೂ. ಮತ್ತು ವೇಣೂರು-ಅಂಡಿಂಜೆ-ನಾರಾವಿ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಗೆ 6 ಕೋಟಿ ರೂ. ಮಂಜೂರಾಗಿದೆ. ರಸ್ತೆ ನವೀಕರಣ ಮತ್ತು ಅಗಲೀಕರಣ ಕಾಮಗಾರಿಗಳಡಿಯಲ್ಲಿ ಎಕ್ಸಲೆಂಟ್ ಕಾಲೇಜಿನಿಂದ ಮೂಡಬಿದ್ರೆ ಪೊಲೀಸ್ ಸ್ಟೇಷನ್ ವರೆಗಿನ ರಾಜ್ಯ ಹೆದ್ದಾರಿ ನವೀಕರಣಕ್ಕೆ 5 ಕೋಟಿ ರೂ., ಸೋಮಂತಡ್ಕದಿಂದ ಹೆಡ್ಯವರೆಗಿನ ಹೆದ್ದಾರಿ ಅಭಿವೃದ್ಧಿಗೆ 5 ಕೋಟಿ ರೂ. ಹಾಗೂ ಬಂಟ್ವಾಳದ ಅನಂತಾಡಿ-ಮಂಗಿಲಪದವು-ಕೊಡಪದವು ಜಿಲ್ಲಾ ಮುಖ್ಯ ರಸ್ತೆಯ ಅಗಲೀಕರಣಕ್ಕೆ 5 ಕೋಟಿ ರೂ. ಬಳಸಲಾಗುತ್ತಿದೆ.
ಈ ಬೃಹತ್ ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಗಳನ್ನು ಬಲಪಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಈ ಯೋಜನೆಗೆ ಅನುದಾನ ಒದಗಿಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಸಂಸದರು ಧನ್ಯವಾದ ಸಮರ್ಪಿಸಿದ್ದಾರೆ. ಈ ಕಾಮಗಾರಿಗಳು ಪೂರ್ಣಗೊಂಡ ನಂತರ ಜಿಲ್ಲೆಯ ಆರ್ಥಿಕ, ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೆಚ್ಚಿನ ವೇಗ ಸಿಗಲಿದೆ ಎಂದು ಕ್ಯಾ. ಬ್ರಿಜೇಶ್ ಚೌಟ ವಿಶ್ವಾಸ ವ್ಯಕ್ತಪಡಿಸಿದ್ದಾರೆ.