image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಲ್ಲಿ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಸಂಭ್ರಮ

ಧರ್ಮಸ್ಥಳದಲ್ಲಿ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಸಂಭ್ರಮ

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಸಮಾರಂಭವು ಉಜಿರೆಯ ಅಮೃತವರ್ಷಿಣಿ ಸಭಾಭವನದಲ್ಲಿ ಅತ್ಯಂತ ಸಂಭ್ರಮದಿಂದ ನೆರವೇರಿತು. ಕೊಡಗು ವಿರಾಜಪೇಟೆಯ ಪೂಜ್ಯ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜಂಟಿಯಾಗಿ ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಶ್ರೀ ಕ್ಷೇತ್ರದ ಚತುರ್ವಿಧ ದಾನಪರಂಪರೆಯೊಂದಿಗೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಯುತ್ತಿರುವ ಬಹುಮುಖಿ ಸೇವಾಕಾರ್ಯಗಳು ಮಾನವ ಕಲ್ಯಾಣಕ್ಕೆ ಆದರ್ಶ ಮತ್ತು ಅನುಕರಣೀಯವಾಗಿವೆ ಎಂದು ಉದ್ಘಾಟನಾ ಆಶೀರ್ವಚನ ನೀಡಿದ ಪೂಜ್ಯ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘಿಸಿದರು. ಧರ್ಮಸ್ಥಳದವರು ಕಾರ್ಯ ನಿರ್ವಹಿಸದ ಸೇವಾ ಕ್ಷೇತ್ರವೇ ಇಲ್ಲ ಎಂದ ಸ್ವಾಮೀಜಿಯವರು, ವ್ಯಸನಮುಕ್ತರು ದೃಢಸಂಕಲ್ಪದಿಂದ ಸಾರ್ಥಕ ಜೀವನ ನಡೆಸಬೇಕು ಮತ್ತು ಪುಣ್ಯಕ್ಷೇತ್ರದಲ್ಲಿ ಯಾವುದೇ ತಪ್ಪುಗಳನ್ನು ಮಾಡದೆ ಒಳ್ಳೆಯ ವಿಚಾರಗಳನ್ನು ಮನಸ್ಸಿನಲ್ಲಿ ತುಂಬಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವ್ಯಸನದಿಂದ ಮುಕ್ತರಾದವರು ಮುಂದೆ ಯಾವುದೇ ಆಮಿಷ ಅಥವಾ ಒತ್ತಡಗಳಿಗೆ ಬಲಿಯಾಗದೆ ದೃಢಸಂಕಲ್ಪದಿಂದ ಬದುಕಬೇಕು ಎಂದು ಕರೆ ನೀಡಿದರು. ತಾವು ನೆಮ್ಮದಿಯ ಜೀವನ ನಡೆಸುವುದರ ಜೊತೆಗೆ, ಸಮಾಜದಲ್ಲಿರುವ ಇತರ ಮದ್ಯವ್ಯಸನಿಗಳೂ ಸಹ ಈ ದುಶ್ಚಟದಿಂದ ಹೊರಬರುವಂತೆ ಪ್ರೇರಣೆ ಮತ್ತು ಸಹಕಾರ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ವಾರ್ಷಿಕ ವರದಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಹೇಮಾವತಿ ವೀ. ಹೆಗ್ಗಡೆಯವರು, ಮದ್ಯಪಾನದಂತಹ ದುಶ್ಚಟಗಳಿಂದ ಸಮಾಜದಲ್ಲಿ ಕೊಲೆ, ಅತ್ಯಾಚಾರಗಳಂತಹ ಅನ್ಯಾಯಗಳು ಹೆಚ್ಚಾಗುತ್ತಿವೆ ಮತ್ತು ಇದರಿಂದ ಮಹಿಳೆಯರ ಜೀವನ ನರಕಯಾತನೆಯಾಗುತ್ತಿದೆ ಎಂದು ವಿಷಾದಿಸಿದರು. ಮಾನವ ಜನ್ಮ ಶ್ರೇಷ್ಠವಾಗಿದ್ದು, ಪ್ರತಿಯೊಬ್ಬರೂ ಬುದ್ಧಿ, ವಿವೇಕ ಮತ್ತು ಶಕ್ತಿಯನ್ನು ಸದುಪಯೋಗಪಡಿಸಿಕೊಂಡು ಸುಖ-ಶಾಂತಿಯ ಕುಟುಂಬ ಜೀವನ ನಡೆಸಬೇಕು ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ವ್ಯಸನಮುಕ್ತರಾಗಿ ಸಮಾಜದಲ್ಲಿ ವಿಶೇಷ ಸಾಧನೆ ಮಾಡಿದ ಒಂಭತ್ತು ಮಂದಿ ನವಜೀವನ ಸದಸ್ಯರಿಗೆ ಗೌರವಾನ್ವಿತ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಅವರು ಸಾಧಕರಿಗೆ ನವಜೀವನ ಪ್ರಶಸ್ತಿ ಪ್ರದಾನ ಮಾಡಿ, ವ್ಯಸನಮುಕ್ತರು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಗೌರವಯುತ ಹಾಗೂ ನೆಮ್ಮದಿಯ ಜೀವನ ನಡೆಸಬೇಕು ಎಂದು ಹಾರೈಸಿದರು. ಹೊನ್ನಾವರದ ಮಂಜುನಾಯ್ಕ, ನಂಜನಗೂಡಿನ ಮಣಿಕಂಠ ಮತ್ತು ಗದಗ ಜಿಲ್ಲೆಯ ನವಲಗುಂದದ ಜಗದೀಶ ಮಲ್ಲಪ್ಪ ಬ್ಯಾಳಿ ಅವರಿಗೆ “ಜಾಗೃತಿ ಅಣ್ಣ” ಪ್ರಶಸ್ತಿ ನೀಡಲಾಯಿತು. ಹಾಗೆಯೇ ಹುಬ್ಬಳ್ಳಿಯ ಸಿದ್ದಪ್ಪ ಕಲ್ಲಪ್ಪ ನೀಲರಗಿ, ಅಥಣಿಯ ಅಂದಾನಿ ದುರದುಂಡೆಪ್ಪ, ಶಿವಮೊಗ್ಗದ ರಮೇಶ್, ಗದಗದ ಎಸ್.ಎಲ್. ಶಿವಾನಂದ ಕುರಿ, ತುಮಕೂರಿನ ರವಿಕುಮಾರ್ ಮತ್ತು ವಿಜಯಪುರದ ಬಬಲೇಶ್ವರ ಸುಭಾಶ್ ಅವರಿಗೆ “ಜಾಗೃತಿ ಮಿತ್ರ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ.ಒ. ಅನಿಲ್ ಕುಮಾರ್ ಅವರು ಫಲಾನುಭವಿಗಳ ಕಲ್ಯಾಣಕ್ಕಾಗಿ ಸಂಸ್ಥೆ ಹಮ್ಮಿಕೊಂಡ ಯಶಸ್ವಿ ಕಾರ್ಯಕ್ರಮಗಳ ಮಾಹಿತಿ ನೀಡಿದರೆ, ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಇದುವರೆಗೆ ೨,೦೬೩ ಮದ್ಯವರ್ಜನ ಶಿಬಿರಗಳ ಮೂಲಕ ಒಟ್ಟು ೧,೩೮,೦೦೦ ಮದ್ಯವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿ ಪರಿವರ್ತಿಸಿದೆ ಮತ್ತು ಈ ಮಹತ್ಕಾರ್ಯಕ್ಕಾಗಿ ೭೫ ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ ಎಂದು ವಿವರ ನೀಡಿದರು. ಪಾನಮುಕ್ತರ ಪರವಾಗಿ ಕೂಡ್ಲಿಗಿಯ ಸತೀಶ್ ಮತ್ತು ತುಮಕೂರಿನ ಮಂಜುಳಾ ತಮ್ಮ ಬದುಕಿನ ಬದಲಾವಣೆಯ ಅನಿಸಿಕೆಗಳನ್ನು ಹಂಚಿಕೊಂಡರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ ಬಾದಾಮಿ ಧನ್ಯವಾದ ಸಮರ್ಪಿಸಿದರು ಮತ್ತು ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

Category
ಕರಾವಳಿ ತರಂಗಿಣಿ