image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಾ. ಎಂ. ಮೋಹನ್ ಆಳ್ವ ಅವರ 75ನೇ ವರ್ಷದ ಹುಟ್ಟುಹಬ್ಬದ ಅಭಿನಂದನಾ ಸಮಾರಂಭ: ಮೂಡುಬಿದಿರೆಯಲ್ಲಿ ಪ್ರಥಮ ಪೂರ್ವಭಾವಿ ಸಭೆ

ಡಾ. ಎಂ. ಮೋಹನ್ ಆಳ್ವ ಅವರ 75ನೇ ವರ್ಷದ ಹುಟ್ಟುಹಬ್ಬದ ಅಭಿನಂದನಾ ಸಮಾರಂಭ: ಮೂಡುಬಿದಿರೆಯಲ್ಲಿ ಪ್ರಥಮ ಪೂರ್ವಭಾವಿ ಸಭೆ

ಮೂಡುಬಿದಿರೆ : ಜಾತಿ, ಮತ ಹಾಗೂ ಭೇದಗಳನ್ನು ಮರೆತು ಸಮಾಜ ಸೇವೆಗೈದಿರುವ ಶಿಕ್ಷಣ ತಜ್ಞ ಹಾಗೂ ಸಾಂಸ್ಕೃತಿಕ ರಾಯಭಾರಿ ಡಾ. ಎಂ. ಮೋಹನ್ ಆಳ್ವ ಅವರ 75ನೇ ವರ್ಷದ ಪ್ರಯುಕ್ತ ಹುಟ್ಟುಹಬ್ಬದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಕುರಿತು ಶಾಸಕ ಉಮಾನಾಥ ಕೋಟ್ಯಾನ್ ಅವರ ನೇತೃತ್ವದಲ್ಲಿ ಪ್ರಥಮ ಪೂರ್ವಭಾವಿ ಸಭೆಯು ಶುಕ್ರವಾರ ಕನ್ನಡ ಭವನದಲ್ಲಿ ಯಶಸ್ವಿಯಾಗಿ ಜರುಗಿತು. ಸಭೆಯಲ್ಲಿ ಆಳ್ವ ಅವರನ್ನು ಅವರ ಹುಟ್ಟೂರಾದ ಬಿದಿರೆಯಲ್ಲಿ ಅತ್ಯಂತ ಸಂಭ್ರಮದಿಂದ ಗುರುತಿಸಿ ಗೌರವಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾದವು. ಅಲ್ಲದೆ, ಅವರಿಗೆ ರಾಷ್ಟ್ರದ ಅತ್ಯುನ್ನತ 'ಪದ್ಮ ಪ್ರಶಸ್ತಿ'ಯನ್ನು ನೀಡುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಹಾಗೂ ಜನರ ಭಾವನೆಗೆ ಒಪ್ಪುವಂತಹ ಗೌರವ ಅವರಿಗೆ ಸಲ್ಲಿಕೆಯಾಗಬೇಕು ಎಂಬ ಒಕ್ಕೊರಲಿನ ಒತ್ತಾಯಗಳು ಕೇಳಿಬಂದವು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು, ಮೂಡುಬಿದಿರೆಯ ಸಾರ್ವಜನಿಕರೆಲ್ಲರೂ ಒಂದಾಗಿ ಸೇರಿ ಈ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಇದರ ನೆನಪಿಗಾಗಿ ಪ್ರತಿ ವರ್ಷ ಅವರ ಹೆಸರಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಕೊಡುಗೆ ನೀಡುವುದು, ಬಡವರ ಮಕ್ಕಳಿಗೆ ಧನಸಹಾಯ ಮಾಡುವುದು ಹಾಗೂ ಅವರ ಸಾಧನೆಗಳನ್ನು ಒಳಗೊಂಡ ಮಹತ್ವದ ಗ್ರಂಥವೊಂದನ್ನು ಪ್ರಕಟಿಸಲು ಯೋಜಿಸಿರುವುದಾಗಿ ತಿಳಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಅವರು ಮಾತನಾಡಿ, ಈ ಅಭಿನಂದನಾ ಸಭೆಯನ್ನು ಕನ್ನಡ ಭವನದಲ್ಲೇ ನಡೆಸುವಂತೆ ಸೂಕ್ತ ಸಲಹೆ ನೀಡಿದ್ದಲ್ಲದೆ, ಕಾರ್ಯಕ್ರಮದ ಯಶಸ್ಸಿಗಾಗಿ ತಮ್ಮ ವೈಯಕ್ತಿಕ ದೇಣಿಗೆಯಾಗಿ 1 ಲಕ್ಷ ರೂಪಾಯಿಗಳನ್ನು ಘೋಷಿಸಿದರು.

ಈ ಪೂರ್ವಭಾವಿ ಸಭೆಯಲ್ಲಿ ಪ್ರಮುಖ ಉದ್ಯಮಿಗಳಾದ ಶ್ರೀಪತಿ ಭಟ್, ನಾರಾಯಣ ಪಿ. ಎಂ., ಚೌಟರ ಅರಮನೆಯ ಕುಲದೀಪ್ ಎಂ., ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ अध्यक्ष ಯುವರಾಜ್ ಜೈನ್, ಆಳ್ವಾಸ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಹರೀಶ್ ನಾಯಕ್, ಎಂಸಿಎಸ್ ಸೊಸೈಟಿ ಅಧ್ಯಕ್ಷ ಬಾಹುಬಲಿ ಪ್ರಸಾದ್, ರಾಜೇಶ್ವರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಉದ್ಯಮಿ ಜಯರಾಮ್ ಕೋಟ್ಯಾನ್, ನ್ಯಾಯವಾದಿ ಶ್ವೇತಾ ಜೈನ್, ಕೆಪಿ ಜಗದೀಶ್ ಅಧಿಕಾರಿ ಉಪಸ್ಥಿತರಿದ್ದರು. ಅಲ್ಲದೆ ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ. ಕೆ., ಉದ್ಯಮಿ ಪೂರ್ಣ ಚಂದ್ರ ಜೈನ್, ಮಹೇಂದ್ರ ವರ್ಮ, ಅಶ್ವಿನ್ ಜೆ. ಪಿರೇರಾ, ಅಬುಲ್ ಅಲಾ ಪುತ್ತಿಗೆ, ವಿಶ್ವನಾಥ್ ಕಾಮತ್ ಬೋಳ, ವೆಂಕಟರಮಣ ಹನುಮಂತ ದೇವಸ್ಥಾನಗಳ ಆಡಳಿತ ಮೊಕ್ತೇಸರ ಉಮೇಶ್ ಪೈ, ಡಾ. ಮುರಳಿಪ್ರಸಾದ್ ಪಡುಮಾರ್ನಾಡು, ದಯಾನಂದ ಪೈ, ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ, ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ದಿವಾಕರ್ ಬಂಗೇರ, ರಿಕ್ಷಾ ಯೂನಿಯನ್ ಅಧ್ಯಕ್ಷ ದೀಪಕ್ ರಾಜ್, ರಾಜೇಶ್ ಸುವರ್ಣ, ರಾಹುಲ್ ಕುಲಾಲ್ ಸೇರಿದಂತೆ ನೂರಾರು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ರಾಮಚಂದ್ರ ಮಿಜಾರು ಅವರು ಅಭಿನಂದನಾ ಸಮಾರಂಭದ ಸಂಪೂರ್ಣ ರೂಪುರೇಷೆಗಳನ್ನು ಸಭೆಗೆ ವಿವರಿಸಿ, ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.

Category
ಕರಾವಳಿ ತರಂಗಿಣಿ