ಮಂಗಳೂರು : ಹನಿ ಜೇನಿಕ್ಸ್ ವತಿಯಿಂದ ಜೂನ್ 12ರಿಂದ 14ರವರೆಗೆ ಬೆಂದೂರ್‌ವೇಲ್‌ನ ಸೈಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಅಡಿಟೋರಿಯಂನಲ್ಲಿ ಆಯೋಜಿಸಲಾಗಿರುವ ‘ಕುಡ್ಲ ಪೆಲಕಾಯಿ ಪರ್ಬ’ (ಹಲಸಿನ ಹಣ್ಣಿನ ಮೇಳ) ಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು. ಹಿರಿಯ ಪತ್ರಕರ್ತ ಹಾಗೂ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ.ಎನ್. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೈತರ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಪರಿಚಯಿಸುವಲ್ಲಿ ಈ ರೀತಿಯ ಮೇಳಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅನಿವಾಸಿ ಭಾರತೀಯ ಉದ್ಯಮಿ ಜೇಮ್ಸ್ ಮೆಂಡೋನ್ಸಾ ಮಾತನಾಡಿ, ವಿವಿಧ ತಳಿಯ ಹಲಸಿನ ಹಣ್ಣುಗಳು ಹಾಗೂ ಅದರಿಂದ ತಯಾರಿಸಿದ ವೈವಿಧ್ಯಮಯ ಉತ್ಪನ್ನಗಳನ್ನು ಒಂದೇ ಸೂರಿನಡಿ ನೋಡಲು ಸಿಗುತ್ತಿರುವುದು ಸಂತಸ ತಂದಿದೆ. ಇದು ಬೆಳೆಗಾರರಿಗೆ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಉತ್ತಮ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಅವರು ಮೇಳದ ಯಶಸ್ಸಿಗೆ ಹಾರೈಕೆಗಳನ್ನು ಸಲ್ಲಿಸಿದರು.
ಪೆಲಕಾಯಿ ಪರ್ಬದ ಸಂಯೋಜಕ ಅಶ್ವಿನ್ ಸಿಕ್ವೇರಾ ಬರಿಮಾರ್ ಮಾಹಿತಿ ನೀಡಿ, ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವುದೇ ಈ ಹಬ್ಬದ ಮುಖ್ಯ ಉದ್ದೇಶವಾಗಿದೆ. ಮೇಳದಲ್ಲಿ ದಕ್ಷಿಣ ಕನ್ನಡ, ತುಮಕೂರು, ಚಿಕ್ಕಬಳ್ಳಾಪುರ, ಹಾಸನ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ರೈತರ ಹಲಸಿನ ತಳಿಗಳು, ಮೌಲ್ಯವರ್ಧಿತ ಉತ್ಪನ್ನಗಳು, ಕಿರು ಉದ್ಯಮಿಗಳ ಕೈಚಳಕದ ಕರಕುಶಲ ವಸ್ತುಗಳು ಹಾಗೂ ಪರಿಸರ ಸ್ನೇಹಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವಿದೆ. ಕಳೆದ ವರ್ಷ 60 ಮಳಿಗೆಗಳಿದ್ದವು, ಆದರೆ ಈ ಬಾರಿ 80ಕ್ಕೂ ಅಧಿಕ ಮಳಿಗೆಗಳು ಭಾಗವಹಿಸಿವೆ. ಜೂನ್ 14ರವರೆಗೆ ನಡೆಯಲಿರುವ ಈ ಮೇಳದಲ್ಲಿ ಮಕ್ಕಳಿಗಾಗಿ ಚಿತ್ರಕಲೆ, ಸ್ಪರ್ಧೆ ಹಾಗೂ ವಿವಿಧ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಯೋಜಕರುಗಳಾದ ರೋಹನ್ ವಾಮಂಜೂರು, ಶೆಲ್ಡನ್ ಕ್ರಾಸ್ತಾ, ಜಾಕ್ಸನ್ ಸಲ್ಡಾನ್ಹ, ದೀಪಕ್ ಬೆಂದೂರು ಹಾಗೂ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ತೋಟಗಾರಿಕೆ ಇಲಾಖೆ ಅಧಿಕಾರಿ ದರ್ಶನ್, ಉದ್ಯಮಿ ಮತ್ತು ಸಮಾಜ ಸೇವಕ ಲಾರೆನ್ಸ್ ಡಿ'ಸೋಜಾ, ನಿತಿನ್ ಪೂಜಾರಿ, ಹ್ಯಾಂಗ್ಯೋ ಮಾರಾಟ ಮುಖ್ಯಸ್ಥ ರಾಕೇಶ್ ಕಾಮತ್ ಮತ್ತು ಬೆಂದೂರ್ ಚರ್ಚ್‌ನ ಧರ್ಮಗುರು ವಂ. ವಾಲ್ಟರ್ ಡಿ'ಸೋಜಾ ಮುಂತಾದ ಗಣ್ಯರು ಉಪಸ್ಥಿತರಿದ್ದು ಮೇಳಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.