image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರುಡ್ ಸೆಟ್ ಸಂಸ್ಥೆಯಲ್ಲಿ ವೃತ್ತಿಪರ ಮೇಕಪ್ ಮಾಸ್ಟರ್‌ಕ್ಲಾಸ್ ಕಾರ್ಯಾಗಾರ ಉದ್ಘಾಟನೆ

ರುಡ್ ಸೆಟ್ ಸಂಸ್ಥೆಯಲ್ಲಿ ವೃತ್ತಿಪರ ಮೇಕಪ್ ಮಾಸ್ಟರ್‌ಕ್ಲಾಸ್ ಕಾರ್ಯಾಗಾರ ಉದ್ಘಾಟನೆ

ಉಜಿರೆ: ಇಲ್ಲಿನ ಪರಮ ಪೂಜ್ಯ ಡಾ.‌ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ಒಂದು ದಿನದ ವೃತ್ತಿಪರ 'ಮೇಕಪ್ ಮಾಸ್ಟರ್‌ಕ್ಲಾಸ್' ಕಾರ್ಯಾಗಾರವು ಅತ್ಯಂತ ಯಶಸ್ವಿಯಾಗಿ ಆಯೋಜನೆಗೊಂಡಿತು.

ಈ ವಿಶೇಷ ಕಾರ್ಯಾಗಾರವನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಪದವೀಧರ (ಸ್ವಾಯತ್ತ) ಕಾಲೇಜಿನ ಡೀನ್ ಆಗಿರುವ ಡಾ. ಸೌಮ್ಯ ಅವರು ಅಧಿಕೃತವಾಗಿ ಉದ್ಘಾಟಿಸಿದರು. ಬಳಿಕ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಮಯ ಪಾಲನೆ, ಶಿಸ್ತು ಮತ್ತು ನಿರಂತರ ಹೊಸತನದ ಮನೋಭಾವವನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಆಶಯ ನುಡಿಗಳನ್ನು ಆಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅಂತರಾಷ್ಟ್ರೀಯ ಪ್ರಮಾಣೀಕೃತ ಮೇಕಪ್ ಆರ್ಟಿಸ್ಟ್, ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಹಾಗೂ ಮೇಕಪ್ ಎಜುಕೇಟರ್ ಆಗಿರುವ ಹಾಸನದ ಶ್ರೀ ಸೋಮು ಹಾಸನ್ ಅವರು ತಮ್ಮ ದೀರ್ಘ ವೃತ್ತಿಜೀವನದ ಅನುಭವ ಹಾಗೂ ಸೂಕ್ಷ್ಮ ವಿಚಾರಗಳನ್ನು ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಶ್ರೀ ಸೋಮು ಹಾಸನ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಬಿ. ಪಿ. ವಿಜಯಕುಮಾರ್ ಅವರು ಮಾತನಾಡಿ, ಶಿಬಿರಾರ್ಥಿಗಳು ಇಲ್ಲಿ ಉತ್ತಮ ತರಬೇತಿ ಪಡೆದ ನಂತರ ತಮ್ಮ ಸ್ವಾವಲಂಬಿ ವ್ಯವಹಾರವನ್ನು ಯಶಸ್ವಿಯಾಗಿ ಮುನ್ನಡೆಸಲು ಬ್ಯಾಂಕ್ ಸಾಲದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಮೂಲ್ಯ ಸಲಹೆ ನೀಡಿದರು.

ವೇದಿಕೆಯಲ್ಲಿ ಅತಿಥಿ ಉಪನ್ಯಾಸಕರಾದ ಶ್ರೀಮತಿ ಮಾಧವಿ. ಎಂ. ರೈ ಹಾಗೂ ಶ್ರೀಮತಿ ಆಶಾ ಸೋಮು (ಹಾಸನ) ಉಪಸ್ಥಿತರಿದ್ದರು. ಕುಮಾರಿ ಜಲಜಾಕ್ಷಿ ಮತ್ತು ಶ್ರಾವಣಿ ತಂಡದವರು ಪ್ರಾರ್ಥನಾ ಗೀತೆಯನ್ನು ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಭಕ್ತಿಪೂರ್ವಕ ಚಾಲನೆ ನೀಡಿದರು.

ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಶ್ರೀ ಅಬ್ರಹಾಂ ಜೇಮ್ಸ್ ಅವರು ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು. ಮತ್ತೊಬ್ಬ ಹಿರಿಯ ಉಪನ್ಯಾಸಕರಾದ ಶ್ರೀ ಕೆ. ಕರುಣಾಕರ ಜೈನ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು. ಸಂಸ್ಥೆಯ ಸಹೋದ್ಯೋಗಿಗಳಾದ ಶ್ರೀಮತಿ ರಶ್ಮಿ, ಶ್ರೀ ಪ್ರವೀಣ್ ‌ಕುಮಾರ್, ಕಾಶ್ಮೀರ ಡಿ ಸೋಜಾ ಹಾಗೂ ಸುರೇಶ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Category
ಕರಾವಳಿ ತರಂಗಿಣಿ