ಮೂಡುಬಿದಿರೆ : ಕನ್ನಡ ರಂಗಭೂಮಿಗೆ ಪ್ರತಿವರ್ಷವೂ ಹಲವು ಶ್ರೇಷ್ಠ ನಾಟಕಗಳನ್ನು ಕೊಡುಗೆಯಾಗಿ ನೀಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಾಟಕ ವಿಭಾಗವಾದ 'ಆಳ್ವಾಸ್ ರಂಗ ಅಧ್ಯಯನ ಕೇಂದ್ರ'ದ ತಂಡಕ್ಕೆ ಸದ್ಯ ಕಲಾವಿದರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಂಗಾಭಿನಯ, ಮಾತುಗಾರಿಕೆ ಹಾಗೂ ತಾಂತ್ರಿಕ ವಿಭಾಗಗಳಲ್ಲಿ ತರಬೇತಿ ಪಡೆದು, ಸಂಪೂರ್ಣ ವೃತ್ತಿಪರ ತಂಡದಂತೆ ನಾಟಕಗಳ ತಿರುಗಾಟ ಮಾಡಲು ಆಸಕ್ತಿ ಇರುವ ರಂಗ ಕಲಾವಿದರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಒಂದು ವರ್ಷದ ರಂಗ ಶಿಕ್ಷಣ ಪದವಿ ಅಥವಾ ಕನಿಷ್ಠ ನಾಲ್ಕೈದು ನಾಟಕಗಳಲ್ಲಿ ಅಭಿನಯಿಸಿದ ಅನುಭವವನ್ನು ಹೊಂದಿರಬೇಕು. ಜೊತೆಗೆ 20 ರಿಂದ 35 ವರ್ಷದೊಳಗಿನ ವಯೋಮಿತಿಯ ರಂಗಾಸಕ್ತರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಹ ಕಲಾವಿದರು ತಮ್ಮ ಅರ್ಜಿಗಳನ್ನು ಜೂನ್ 17 ರೊಳಗಾಗಿ 'ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ), ಮೂಡುಬಿದಿರೆ, ದಕ್ಷಿಣ ಕನ್ನಡ' ಈ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕಾಗಿದೆ.
ಅರ್ಜಿ ಸಲ್ಲಿಸಿದ ಬಳಿಕ ನಡೆಯುವ ಸಂದರ್ಶನದಲ್ಲಿ ಆಯ್ಕೆಯಾಗುವ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಇದರೊಂದಿಗೆ ಕಲಾವಿದರ ರಂಗಪ್ರತಿಭೆಗೆ ಅನುಸಾರವಾಗಿ ತಿಂಗಳ ವೇತನವನ್ನು ಕೂಡ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಜೀವನ್ ರಾಂ ಸುಳ್ಯ (ಮೊಬೈಲ್ ಸಂಖ್ಯೆ: 9448215946) ಅವರನ್ನು ಸಂಪರ್ಕಿಸಬಹುದಾಗಿದೆ.