ಸುಳ್ಯ : ಭಾರತದ ಪ್ರಧಾನಿಯಾಗಿ ಸಥ 4399 ದಿನಗಳ ಕಾಲ ನಿರಂತರವಾಗಿ ಜನಸೇವೆ ಸಲ್ಲಿಸಿ ಐತಿಹಾಸಿಕ ಸಾಧನೆಗೈದ ಪ್ರಧಾನಸೇವಕ ನರೇಂದ್ರ ಮೋದಿ ಅವರ ಗೌರವಾರ್ಥವಾಗಿ ಸುಳ್ಯ ಬಿಜೆಪಿ ಮಂಡಲದ ವತಿಯಿಂದ ಪೆರುವಾಜೆ ಜಲದುರ್ಗಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ಭಕ್ತಿಭಾವದಿಂದ ನೆರವೇರಿಸಲಾಯಿತು.
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸತತ 4398 ದಿನಗಳ ಆಡಳಿತದ ದಾಖಲೆಯನ್ನು ಮೀರಿಸಿ, ಅತ್ಯಂತ ದೀರ್ಘಾವಧಿಗೆ ನಿರಂತರವಾಗಿ ದೇಶವನ್ನು ಮುನ್ನಡೆಸಿದ ಹೆಗ್ಗಳಿಕೆಗೆ ಪಾತ್ರರಾದ ಮೋದಿ ಅವರ ಸಾಧನೆಯನ್ನು ಸಂಭ್ರಮಿಸಲು ಹಾಗೂ ಮುಂದಿನ ಜನಸೇವೆಯ ಪಥದಲ್ಲಿ ಹೆಚ್ಚಿನ ಶಕ್ತಿ ದೊರಕಲಿ ಎಂಬ ಆಶಯದಿಂದ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ, ಆಯುಷ್ಯ ವೃದ್ಧಿ ಹಾಗೂ ದೇಶವನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯಲು ಅವರಿಗೆ ಭಗವಂತನು ಹೆಚ್ಚಿನ ಶಕ್ತಿ ನೀಡಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯ್ ಕಂದಡ್ಕ, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಜಿಲ್ಲಾ ಕಾರ್ಯದರ್ಶಿ ಪುಷ್ಪಮೇದಪ್ಪ, ಬೆಳ್ಳಾರೆ ಮಹಾಶಕ್ತಿ ಕೇಂದ್ರ ಪ್ರಮುಖ ಅಜಿತ್ ಕಿಲ್ಲಂಗೋಡಿ, ಕಾರ್ಯದರ್ಶಿ ಶಿವಪ್ರಸಾದ್ ನಡುತೋಟ, ಚಂದ್ರಶೇಖರ ಪನ್ನೆ, ಯುವಮೋರ್ಚಾ ಸದಸ್ಯ ಹರ್ಷಿತ್ ಪೆರುವಾಜೆ, ಪದ್ಮನಾಭ ಶೆಟ್ಟಿ ಪೆರುವಾಜೆ, ಕುಶಾಲಪ್ಪ ಮುಕ್ಕೂರು, ರಮೇಶ್, ವಿಜಯ್, ವೆಂಕಟಕೃಷ್ಣ ರಾವ್, ಪೂರ್ಣಿಮಾ, ಪದ್ಮನಾಭ ಕಲಾಸುಮ, ಪ್ರಸಾದ್ ಕಾಟೂರು ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳು ಭಾಗವಹಿಸಿದರು.