ಧರ್ಮಸ್ಥಳ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ–2ರಲ್ಲಿ ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಜಿ. ಮಾಧುರ್ಯ ಅವರು 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಅಪೂರ್ವ ಸಾಧನೆ ಮೆರೆದಿದ್ದಾರೆ.
ಮಾಧುರ್ಯ ಅವರು ಧರ್ಮಸ್ಥಳದ ಅನ್ನಪೂರ್ಣ ಛತ್ರದ ಪ್ರಬಂಧಕರಾದ ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಮಧುರಾ ದಂಪತಿಯ ಪುತ್ರಿಯಾಗಿದ್ದಾರೆ.
ಅವರ ಈ ಅತ್ಯುನ್ನತ ಸಾಧನೆಯನ್ನು ಅಭಿನಂದಿಸಿ ಜೂನ್ 8ರಂದು ಧರ್ಮಸ್ಥಳದ ಅನ್ನಪೂರ್ಣ ಛತ್ರದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಸಿಬ್ಬಂದಿಗಳಾದ ಭರತ್‌ರಾಜ್ ಜೈನ್, ಶ್ರೇಣಿಕ್, ರಾಜು ಸಪಲ್ಯ, ದೇವಿಪ್ರಸಾದ್, ಅಪ್ಪು ಬಿ., ಬಾಬು ಬಿ., ಉಮೇಶ ಯಂ., ಬಾಕಕೃಷ್ಣ ಶೆಟ್ಟಿ ಸೇರಿದಂತೆ ಇತರರು ಜಿ. ಮಾಧುರ್ಯ ಅವರನ್ನು ಗೌರವಿಸಿ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಸಿಬ್ಬಂದಿಗಳು, ಮಾಧುರ್ಯ ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಮುಂದಿನ ವಿದ್ಯಾಭ್ಯಾಸದಲ್ಲಿಯೂ ಇದೇ ರೀತಿ ಶ್ರೇಷ್ಠ ಸಾಧನೆ ಮಾಡಿ ಕುಟುಂಬ, ಶಾಲೆ ಹಾಗೂ ಸಮಾಜಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು.