ಶಕ್ತಿನಗರ: ಇಲ್ಲಿನ ನಾಲ್ಯಪದವು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಂಆರ್‌ಪಿಎಲ್ ಸಂಸ್ಥೆಯ ಸಿಎಸ್‌ಆರ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಬಾಲಕಿಯರ ಮತ್ತು ಬಾಲಕರ ಶೌಚಾಲಯಗಳು, ನೀರಿನ ಸಂಪು ಹಾಗೂ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಉದ್ಘಾಟನಾ ಸಮಾರಂಭವು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು, ವಿದ್ಯಾರ್ಥಿಗಳ ಆರೋಗ್ಯ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ಇಂತಹ ಮೂಲಭೂತ ಸೌಕರ್ಯಗಳು ಅತ್ಯಂತ ಅಗತ್ಯವಾಗಿದ್ದು, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಎಂಆರ್‌ಪಿಎಲ್ ನೀಡುತ್ತಿರುವ ಸಹಕಾರ ಶ್ಲಾಘನೀಯ. ಮುಂದಿನ ದಿನಗಳಲ್ಲಿಯೂ ಶಿಕ್ಷಣ ಕ್ಷೇತ್ರದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಒಗ್ಗೂಡಿ ಕೆಲಸ ಮಾಡೋಣ ಎಂದು ಭರವಸೆ ನೀಡಿದರು.
ಎಂಆರ್‌ಪಿಎಲ್ ಸಿಎಸ್‌ಆರ್ ವಿಭಾಗದ ವ್ಯವಸ್ಥಾಪಕ ಹರೀಶ್ ರಾವ್ ಮಾತನಾಡಿ, ಸಂಸ್ಥೆಯು ಸಮುದಾಯದ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸ್ವಚ್ಛತೆಯನ್ನು ಸುಧಾರಿಸಲು ಬದ್ಧವಾಗಿದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಜಯಾನಂದ ಎನ್. ಸುವರ್ಣ ಅವರು ಮಾತನಾಡಿ, ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸಿದ ಎಂಆರ್‌ಪಿಎಲ್ ಸಂಸ್ಥೆ ಹಾಗೂ ಅದಕ್ಕೆ ವಿಶೇಷ ಪ್ರಯತ್ನ ಮಾಡಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯರಾದ ವನಿತಾ ಪ್ರಸಾದ್, ಶಕೀಲಾ ಕಾವಾ, ಮುಖ್ಯೋಪಾಧ್ಯಾಯರಾದ ಶಾರದಾ ಮತ್ತು ಪ್ರಶಾಂತ್ ಕುಮಾರ್, ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಾಲ್ ಕುಮಾರ್, ಸಿಬಿಸಿ ಸದಸ್ಯ ಅಶೋಕ್ ನಾಯ್ಕ್, ಎಸ್‌ಡಿಎಂಸಿ ಅಧ್ಯಕ್ಷ ಕಿಶೋರ್, ಉದ್ಯಮಿಗಳಾದ ವಿಜಯ ಶೆಣೈ, ಪ್ರಸಾದ್, ಹಿರಿಯ ಶಿಕ್ಷಕಿ ದಾಕ್ಷಾಯಿಣಿ, ಉಪನ್ಯಾಸಕಿ ಸರಳಾದೇವಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಸರಳಾದೇವಿ ಪಿ. ಕಾರ್ಯಕ್ರಮ ನಿರೂಪಿಸಿದರು, ಪ್ರಶಾಂತ್ ಕುಮಾರ್ ವಂದನಾರ್ಪಣೆ ಸಲ್ಲಿಸಿದರು.