ಮಂಗಳೂರು: ಮೂಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೂರಿಂಜೆ ಗ್ರಾಮ ಪಂಚಾಯತ್‌ನ 159ನೇ ಬೂತ್‌ನ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.
ಸೂರಿಂಜೆ-ಪುಚ್ಚಾಡಿ ರಸ್ತೆ ಕಳೆದ ಹದಿನೈದು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಣದೆ ಸಂಪೂರ್ಣ ಹದಗೆಟ್ಟಿದ್ದು, ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ರಸ್ತೆಯು ಹೊಂಡ-ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ನಿತ್ಯ ಪ್ರಾಣಭಯದಲ್ಲಿ ಸಂಚರಿಸುವಂತಾಗಿದೆ. ಕಳೆದ ಐದು ವರ್ಷಗಳಿಂದ ಗ್ರಾಮ ಪಂಚಾಯಿತಿಗೆ ಪದೇ ಪದೇ ಮನವಿ ಸಲ್ಲಿಸಿದರೂ, ಕೇವಲ ಭರವಸೆಗಳೇ ಸಿಕ್ಕಿವೆಯೇ ಹೊರತು ಕಾಮಗಾರಿ ನಡೆದಿಲ್ಲ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ ಜನರ ಮೂಲಭೂತ ಸೌಕರ್ಯಕ್ಕೆ ಸ್ಪಂದಿಸುವಲ್ಲಿ ಪಕ್ಷದ ಮುಖಂಡರು ವಿಫಲರಾಗಿರುವುದರಿಂದ, ನೈತಿಕ ಹೊಣೆ ಹೊತ್ತು ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಬೂತ್ ಅಧ್ಯಕ್ಷ ಸುರೇಶ್ ಶೆಟ್ಟಿ, ಕಾರ್ಯದರ್ಶಿ ಮಾಧವ ಸೂರಿಂಜೆ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಈ ಪತ್ರಕ್ಕೆ ಸಹಿ ಹಾಕಿದ್ದು, ತಕ್ಷಣವೇ ರಸ್ತೆ ಡಾಮರೀಕರಣ ಅಥವಾ ಕಾಂಕ್ರೀಟೀಕರಣ ಕಾಮಗಾರಿಯನ್ನು ಆರಂಭಿಸದಿದ್ದರೆ ಮತದಾನ ಬಹಿಷ್ಕರಿಸುವುದು ಅನಿವಾರ್ಯವೆಂದು ಎಚ್ಚರಿಕೆ ನೀಡಿದ್ದಾರೆ.