image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉಳ್ಳಾಲ ತಾಲೂಕು ಆಸ್ಪತ್ರೆ ಸ್ಥಾಪನೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ದೇರಳಕಟ್ಟೆಯಲ್ಲಿ ಡಿವೈಎಫ್‌ಐ ಪ್ರತಿಭಟನೆ

ಉಳ್ಳಾಲ ತಾಲೂಕು ಆಸ್ಪತ್ರೆ ಸ್ಥಾಪನೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ದೇರಳಕಟ್ಟೆಯಲ್ಲಿ ಡಿವೈಎಫ್‌ಐ ಪ್ರತಿಭಟನೆ

ದೇರಳಕಟ್ಟೆ : ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು, ಜಯದೇವ ಹೈಡ್ರೋಗ್ ಹಾಗೂ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲು ಮತ್ತು ಮುಡಿಪು ಹೋಬಳಿಗೆ ಸಮುದಾಯ ಆಸ್ಪತ್ರೆ ಮಂಜೂರು ಮಾಡುವಂತೆ ಒತ್ತಾಯಿಸಿ ಇಂದು ದೇರಳಕಟ್ಟೆ ಜಂಕ್ಷನ್‌ನಲ್ಲಿ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಯಿತು. ಡಿವೈಎಫ್‌ಐ ಉಳ್ಳಾಲ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಉಳ್ಳಾಲ ತಾಲೂಕಿಗೆ 100 ಹಾಸಿಗೆಗಳ ಸರ್ಕಾರಿ ತಾಲೂಕು ಆಸ್ಪತ್ರೆಯನ್ನು ತಕ್ಷಣವೇ ಸ್ಥಾಪಿಸಬೇಕು ಹಾಗೂ ಖಾಸಗಿ ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಕರಾರು ಒಪ್ಪಂದವನ್ನು ರದ್ದುಗೊಳಿಸಬೇಕು ಎಂದು ತೀವ್ರವಾಗಿ ಆಗ್ರಹಿಸಲಾಯಿತು.

​ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಅವರು, ನೂತನ ಸಚಿವ ಸಂಪುಟದಲ್ಲಿ ಆರೋಗ್ಯ ಮಂತ್ರಿಯಾಗಿ ಆಯ್ಕೆಯಾಗಿರುವ ಯು.ಟಿ. ಖಾದರ್ ಅವರು ಖಾಸಗಿ ಮೆಡಿಕಲ್ ಕಾಲೇಜುಗಳ ಪರವಹಿಸುವುದನ್ನು ನಿಲ್ಲಿಸಬೇಕು ಮತ್ತು ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ನಾಲ್ಕೈದು ಖಾಸಗಿ ಮೆಡಿಕಲ್ ಕಾಲೇಜುಗಳಿರುವ ಉಳ್ಳಾಲದ ಈ ಭಾಗದಲ್ಲಿ ಕನಿಷ್ಠ ಒಂದು ಸರ್ಕಾರಿ ತಾಲೂಕು ಆಸ್ಪತ್ರೆಯನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಅದರ ಬದಲಿಗೆ, ಈಗಿರುವ ಆರೋಗ್ಯ ಕೇಂದ್ರಗಳನ್ನು ಖಾಸಗಿ ಆಸ್ಪತ್ರೆಗಳಿಗೆ ವಹಿಸಿಕೊಟ್ಟಿರುವುದು ಅತ್ಯಂತ ದುರಂತದ ಸಂಗತಿಯಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

​ನಂತರ ಮಾತನಾಡಿದ ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅವರು, ಸಾರ್ವಜನಿಕರಿಗೆ ಅಗತ್ಯ ಸೌಲತ್ತುಗಳನ್ನು ಒದಗಿಸುವುದು ಅತ್ಯಂತ ಮುಖ್ಯವಾಗಿದೆ. ಆರೋಗ್ಯ ಸಚಿವರು ತಮ್ಮ ಸ್ವಕ್ಷೇತ್ರವನ್ನೊಮ್ಮೆ ಸೂಕ್ಷ್ಮವಾಗಿ ನೋಡಬೇಕಿದೆ. ಉಳ್ಳಾಲ ತಾಲೂಕಾಗಿ ಆರು ವರ್ಷಗಳು ಕಳೆದರೂ ಇಲ್ಲಿ ಕನಿಷ್ಠ ಒಂದು ಆಡಳಿತ ಸೌಧವಿಲ್ಲ, ತಾಲೂಕು ಆಸ್ಪತ್ರೆಯಿಲ್ಲ, ಸರ್ಕಾರಿ ಪದವಿ ಕಾಲೇಜಾಗಲಿ ಅಥವಾ ಸಾರ್ವಜನಿಕ ಶೌಚಾಲಯವಾಗಲಿ ಇಲ್ಲ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಈ ಕ್ಷೇತ್ರದ ಜನರ ಬಗ್ಗೆ ಶಾಸಕರು ಹೇಳುವ ವಿಚಾರಗಳಿಗೂ ಮತ್ತು ಇಲ್ಲಿನ ವಾಸ್ತವಕ್ಕೂ ಯಾವುದೇ ಸಂಬಂಧವೇ ಇಲ್ಲ ಎಂದು ಕಿಡಿಕಾರಿದರು. ಸಭೆಯಲ್ಲಿ ಡಿವೈಎಫ್‌ಐ ಉಳ್ಳಾಲ ತಾಲೂಕು ಅಧ್ಯಕ್ಷರಾದ ಅಡ್ವೋಕೇಟ್ ನಿತಿನ್ ಕುತ್ತಾರ್ ಅವರು ಕೂಡ ಉಪಸ್ಥಿತರಿದ್ದು ಮಾತನಾಡಿದರು.

​ಈ ಬೃಹತ್ ಪ್ರತಿಭಟನೆಯಲ್ಲಿ ಡಿವೈಎಫ್‌ಐ ಜಿಲ್ಲಾ ಮುಖಂಡರುಗಳಾದ ಸುನಿಲ್ ತೇವಲ, ರಝಾಕ್ ಮುಡಿಪು, ಅಶ್ರಫ್ ಹರೇಕಳ, ಸಫರ್ ರಾಜ್ ಗಂಡಿ, ವಿಕಾಸ್ ಕುತ್ತಾರ್, ಮಿಥುನ್ ಕುತ್ತಾರ್, ಬಷೀರ್ ಹರೇಕಳ, ರಝಾಕ್ ಮೊಂಟೆಪದವು, ಶರೀಫ್ ಮೊಂಟೆಪದವು, ಮಹಾಬಲ ದೆಪ್ಪೆಲಿಮಾರ್, ಶೇಮಿರ್ ಕುತ್ತಾರ್, ಅಬೂಬಕರ್ ಜಲಿ, ಇಬ್ರಾಹಿಂ ಮುದಕ, ಖಾದರ್ ಸಣ್ಣಬೈಲ್, ರಿಝ್ವಾನ್ ಆಲಡ್ಕ, ಸಂಕೇತ್ ಕುತ್ತಾರ್, ಫಾರೂಕ್ ಕೋಣಾಜೆ, ರಮೇಶ್ ಉಳ್ಳಾಲ, ಸಿರಾಜ್ ಮೊಂಟೆಪದವು, ಅಮೀರ್ ಉಳ್ಳಾಲ ಬೈಲ್, ಇಮ್ರಾನ್ ಗಂಡಿ, ದಿವ್ಯರಾಜ್ ಕುತ್ತಾರ್ ಹಾಗೂ ಭರತ್ ಕುತ್ತಾರ್ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಡಿವೈಎಫ್‌ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಅವರು ಎಲ್ಲರನ್ನೂ ಸ್ವಾಗತಿಸಿ, ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.

Category
ಕರಾವಳಿ ತರಂಗಿಣಿ